ಚಿಕ್ಕಮಗಳೂರು : ಕಾಂಗ್ರೆಸ್ಸಿಗರು ಲಾಲ್.. ಬಾಲ್.. ಪಾಲ್.. ಮಾನಸಿಕತೆಗೂ ಬಂದಿಲ್ಲ. ಗಾಂಧಿ, ಸರ್ದಾರ್ ವಲ್ಲಾಬಾಯ್ ಪಟೇಲ್ ಮಾನಸಿಕತೆಯಿಂದ ದೂರ ಹೋಗಿದ್ದಾರೆ. ಈಗ ಇರೋದು ಎ ಹೋ ಹ್ಯೂಂ.. ಅಂಟಾನಿಯಾ ಮೈನೋ ಮಾನಸಿಕತೆ ಪಾರ್ಟಿ ಅನ್ನೋದು ಅರ್ಥ ಆಗ್ತಿದೆ. ಇವರಿಂದ ದೇಶಕ್ಕೆ ಒಳ್ಳೆಯದು ಆಗೋದು ಬಹಳ ದೂರದ ಮಾತು ಎಂದು ಮಾಜಿ ಸಚಿವ ಸಿ.ಟಿ ರವಿ ಕುಟುಕಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂವಿಧಾನದ ಆಶಯಗಳಿಗೂ ತದ್ವಿರುದ್ಧವಾಗಿರುವ ಪಾರ್ಟಿ. ಪ್ರಜಾಪ್ರಭುತ್ವವನ್ನು ಪಂಶಪಾರಂಪರ್ಯ ಅಂತ ಭಾವಿಸಿರುವ ಪಾರ್ಟಿ. ಜಾತ್ಯಾತೀತತೆ ಅಂದ್ರೆ ಜಾತಿಯನ್ನು ಎತ್ತಿಕೊಟ್ಟುವುದು ಅಂತ ತಿಳಿದಿರುವ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತ ಹೆಸರಿಟ್ಟುಕೊಂಡ ಕಾಂಗ್ರೆಸ್ ಭಾರತದ ಮೇಲೆ ಅಸಹನೆ ಹೊಂದಿದೆ. ಈಗಿನ ಕಾಂಗ್ರೆಸ್ ತನ್ನ ಮೈತ್ರಿಕೂಟದ ಒಡಲಲ್ಲಿ ಸನಾತನ ಧರ್ಮದ ವಿಷಬೀಜಗಳನ್ನು ತುಂಬಿಕೊಂಡಿದೆ. ಅದಕ್ಕೆ ಸಚಿವ ಸ್ಟಾಲಿನ್, ಸಂಸದ ರಾಜ ಕೊಟ್ಟಿರುವ ಹೇಳಿಕೆಯನ್ನು ಹಲವು ಕಾಂಗ್ರೆಸ್ಸಿಗರು ಸಮರ್ಥಿಸಿಕೊಂಡಿದ್ದಾರೆ. ಈಗ ಡ್ಯಾಮೇಜ್ ಆಗ್ತಿದೆ ಅಂತ ಗೊತ್ತಾಗಿ ದೂರ ಇರುವ ಪ್ರಯತ್ನ ಮಾಡ್ತಿದ್ದಾರೆ. ಅವರಿಗಿರೋದು ಸನಾತನ ಧರ್ಮದ ದ್ವೇಷ, ಭಾರತದ ಬಗ್ಗೆ ಅಸಹನೆ ಎಂದು ಗುಡುಗಿದರು.
ಮೋದಿ ಮತ್ತೆ ಪ್ರಧಾನಿ ಆಗಬೇಕು
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಕುರಿತು ಮಾತನಾಡಿದ ಅವರು, ಮಾಧ್ಯಮದಲ್ಲಿ ಬರುವ ಎಲ್ಲಾ ಸುದ್ದಿ ಅಧಿಕೃತ ಅಂತ ಈಗಲೇ ಮುದ್ರೆ ಒತ್ತಲು ಸಾಧ್ಯವಿಲ್ಲ. ನಮ್ಮ ವರಿಷ್ಠರು ಅಳೆದು ತೂಗಿ ನಿರ್ಣಯ ತೆಗೆದುಕೊಂಡಿರುತ್ತಾರೆ ಅನ್ನೋದು ನಮ್ಮ ನಂಬಿಕೆ. ವರಿಷ್ಠರು ಅಧಿಕೃತವಾಗಿ ಪ್ರಕಟಿಸಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ದೇಶಕ್ಕೆ ಮೋದಿ ಮತ್ತೆ ಪ್ರಧಾನಿ ಆಗಬೇಕು, ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನರ ಅಪೇಕ್ಷೆ ಎಂದು ಸಿ.ಟಿ.ರವಿ ಜಾಣ್ಮೆಯ ಉತ್ತರ ನೀಡಿದರು.