ಹಾವೇರಿ : ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ನೀಡಿರುವ ಹೇಳಿಕೆಗೆ ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ್ ಕೆಂಡವಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಸಚಿವ ಶಿವಾನಂದ ಪಾಟೀಲ್ ಅವರಿಗೆ ಹಿರೇಕೆರೂರು ತಾಲೂಕಿನಿಂದ ರೈತರ ಪರವಾಗಿ ಎಲ್ಲರೂ ಸೇರಿಸಿ ಒಂದು ಕೋಟಿ ಕೊಡ್ತಿವಿ. ಆತ್ಮಹತ್ಯೆ ಮಾಡಿಕೊಳ್ತಾರಾ ಸಚಿವರು? ಎಂದು ಕಿಡಿಕಾರಿದ್ದಾರೆ.
5 ಲಕ್ಷ ರೂಪಾಯಿ ಪರಿಹಾರಕ್ಕಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ರೈತ ಸಮುದಾಯಕ್ಕೆ ಅಪಮಾನ, ಅವಮಾನ ಮಾಡಿದ್ದಾರೆ. ಸಚಿವ ಸ್ಥಾನದಿಂದ ಕೂಡಲೆ ಶಿವಾನಂದ ಪಾಟೀಲ್ ಅವರನ್ನು ಸಿಎಂ ಸಿದ್ದರಾಮಯ್ಯ ವಜಾ ಮಾಡಬೇಕು. ಹಾವೇರಿ ಜಿಲ್ಲೆಯಿಂದ ಕಿತ್ತಾಕಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಇದ್ದಾಗ ಹೆಚ್ಚು ಆತ್ಮಹತ್ಯೆ
ಗ್ಯಾರಂಟಿ ನೆಪದಲ್ಲಿ ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಇದ್ದಾಗಲೂ ಅತಿ ಹೆಚ್ಚು ರೈತರ ಆತ್ಮಹತ್ಯೆ ಆಗಿತ್ತು. ಈ ವರ್ಷ ಮತ್ತೆ ರೈತ ಆತ್ಮಹತ್ಯೆಗಳು ಪ್ರಾರಂಭವಾಗಿದೆ. ಗ್ಯಾರಂಟಿ ನೆಪದಲ್ಲಿ ಜನರನ್ನ ದೋಚುತ್ತಿದೆ ಈ ಸರ್ಕಾರ ಎಂದು ಬಿ.ಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.