ಬೆಂಗಳೂರು : ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಅನಿವಾರ್ಯವಾಗಿ ನಾವು ಹೋರಾಟ ಮಾಡ್ತಿದ್ದೇವೆ. ಈ ಹೋರಾಟ ಯಾವ ಸ್ವರೂಪಕ್ಕೆ ಹೋಗುತ್ತೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ವಾರ್ನಿಂಗ್ ಕೊಟ್ಟರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಳೆ ಶಾಸಕರು, ಸಂಸದರು ಸೇರಿ ೧೫ ಸಾವಿರ ಜನರು ಸೇರಿ ಹೋರಾಟ ಮಾಡಲಾಗುವುದು. ಈ ಹೋರಾಟದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ರೂ ಅದಕ್ಕೆ ಸರ್ಕಾರವೇ ಜವಬ್ದಾರಿ ಎಂದು ಎಚ್ಚರಿಕೆ ನೀಡಿದರು.
ನಮ್ಮ ಯಾವ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗೋದಿಲ್ಲ. ನಾನು ಪಕ್ಷದ ಶಾಸಕರ ಜೊತೆಗೆ ಮಾತಾಡಿದ್ದೇನೆ. ನಾಳೆ ಅವರು ಎಲ್ಲರೂ ಪ್ರತಿಭಟನೆಗೆ ಬರುತ್ತಾರೆ. ವಿಪಕ್ಷ ನಾಯಕ ಆಯ್ಕೆ ಇವತ್ತು ಅಥವಾ ನಾಳೆ ಮಾಡ್ತಾರೆ. ವಿರೋಧ ಪಕ್ಷದ ನಾಯಕ ಇಲ್ಲ ಅಂತ, ವಿಪಕ್ಷವಾಗಿ ಕೆಲಸಗಳು ನಿಂತಿಲ್ಲ ಎಂದು ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದರು.
ನಾವೆಲ್ಲರೂ ಒಟ್ಟಾಗಿ ಪಕ್ಷ ಕಟ್ಟಿ ಬೆಳೆಸಬೇಕು
ಯಡಿಯೂರಪ್ಪ ಜೈಲಿಗೆ ಕಳುಹಿಸಿದ್ದು ಬಿಜೆಪಿಯವರೇ ಎಂಬ ರೇಣುಕಾಚಾರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಅದರ ಯಾವುದರ ಬಗ್ಗೆ ಮಾತನಾಡೋಕೆ ಹೋಗಲ್ಲ. ರೇಣುಕಾಚಾರ್ಯ ಅವರನ್ನು ಕರೆದು ಮಾತನಾಡಿದ್ದೇನೆ. ಯಾರು ಯಾವುದಕ್ಕೂ ಕಾರಣರಲ್ಲ. ನಾವೆಲ್ಲರೂ ಒಟ್ಟಾಗಿ ಪಕ್ಷ ಕಟ್ಟಿ ಬೆಳೆಸಬೇಕಿದೆ. ಅದರ ಬಗ್ಗೆ ಗಮನ ಕೊಡಬೇಕು, ಆ ದಿಕ್ಕಿನಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಅವರಿಗೆ ಶೋಭೆ ತರುವುದಿಲ್ಲ
ಶಿವಾನಂದ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, ಶಿವಾನಂದ ಪಾಟೀಲ್ ಮಾತು ಅವರಿಗೆ ಶೋಭೆ ತರುವುದಿಲ್ಲ. ಅವರ ಮಾತನ್ನು ನಾನು ಖಂಡಿಸುತ್ತೇನೆ. ಈ ರೀತಿಯ ಬೇಜವಬ್ದಾರಿ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.