ದಾವಣಗೆರೆ : ಮುಸ್ಲಿಂ, ಕ್ರೈಸ್ತ ಧರ್ಮವನ್ನು ಸಹಿಸಿಕೊಂಡಿರುವುದು ಹಿಂದೂ ಧರ್ಮ. ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಭಾವನಾತ್ಮಕ ಹೇಳಿಕೆ ನೀಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಕುಟುಕಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸನಾತನ ಧರ್ಮದ ವಿಚಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಸನತಾನ ಧರ್ಮದ ಬಗ್ಗೆ ತಲೆಯಲ್ಲಿ ಮಾಂಸ ಆರದವನು ಉದಯ ನಿಧಿ ಮಾರನ್. ಜಗತ್ತಿನಲ್ಲಿಯೇ ಸೆಕ್ಯುಲರ್ ಧರ್ಮ ಹಿಂದೂ ಧರ್ಮ ಎಂದು ವಾಗ್ದಾಳಿ ನಡೆಸಿದರು.
ವಿಷ ಬೀಜ ಬಿತ್ತುವ ಕೆಲಸ
ಇಂಡಿಯಾ ಬದಲು ಭಾರತ್ ಹೆಸರು ಬದಲಾವಣೆ ವದಂತಿ ಬಗ್ಗೆ ಮಾತನಾಡಿದ ಅವರು, ಭಾರತ ಅಂದ್ರೆ ಇವರಿಗೇನು ಸಮಸ್ಯೆ? 5,000 ವರ್ಷದ ಹಿಂದೆಯೇ ಭಾರತ ಎಂದು ಕರೆಯಲ್ಪಿಟ್ಟಿದೆ. ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಚಾಟಿ ಬೀಸಿದರು.
ವರ್ಗಾವಣೆ ಸುಗ್ಗಿಯಲ್ಲಿ ಬ್ಯುಸಿ
ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದು ಮೂರುವರೆ ತಿಂಗಳಾಗಿದೆ. ರಾಜ್ಯದಲ್ಲಿ ಆಡಳಿತ ಕುಸಿದು ಹೋಗಿದೆ. ಇಡೀ ಸರ್ಕಾರ ವರ್ಗಾವಣೆ ಸುಗ್ಗಿಯಲ್ಲಿ ಬ್ಯುಸಿ ಆಗಿದೆ. ಎಲ್ಲಾ ಕೆಲಸ ನಿಲ್ಲಿಸಿ ಕಮಿಷನ್ ಕೇಳ್ತಾ ಇದ್ದಾರೆ. ಎಂದೂ ಇಂಥ ಕೆಟ್ಟ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಬರಗಾಲ ಘೋಷಣೆ ಮಾಡಬೇಕಿತ್ತು ಮಾಡಲಿಲ್ಲ ಎಂದು ಕಾರಜೋಳ ಕಿಡಿಕಾರಿದರು.