ಚಾಮರಾಜನಗರ : ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳಿಗೆ ಗಂಡನ ಮನೆಯವರ ಕಿರುಕುಳದ ಹಿನ್ನೆಲೆ ದಯಾಮರಣಕ್ಕೆ ಅನುಮತಿ ಕೋರಿ ಪತ್ರ ಬರೆದ ಬಾಣಂತಿ ಮಹಿಳೆ ಘಟನೆ ಕೊಳ್ಳೇಗಾಲ ತಾಲ್ಲೂಕು ಜಕ್ಕಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲ್ಯಾನ್ಸಿ ಲೀನಾ ಹಾಗೂ ಅರುಳ್ ಸೆಲ್ವ ಎಂಬುವವರು ಪರಸ್ಪರ ಪ್ರೀತಿಸಿ ಮಾದುವೆಯಾಗಿದ್ದರು. ಈಗ ಅದೇ ಅವರಿಗೆ ಮುಳ್ಳಾಗಿ ಹೋಗಿದೆ. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ಅವರಿಗೆ ಈಗಾಗಲೇ ಮೂರು ವರ್ಷದ ಒಂದು ಮಗುವಿದೆ. ಈಗ ಮತ್ತೆ ಒಂದು ತಿಂಗಳ ಪುಟ್ಟ ಕಂದಮ್ಮ ಕೈಯಲ್ಲಿದೆ.
ಇದನ್ನು ಓದಿ : ಅಶ್ಲೀಲ ವಿಡಿಯೋ ಹರಿಬಿಡುವ ಬೆದರಿಕೆ ; ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು
ಲ್ಯಾನ್ಸಿ ಲೀನಾ ಮತ್ತು ಅರುಳ್ ಸೆಲ್ವ ತುಂಬಾ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡಿದ್ದರು. ಬಳಿಕ 4 ಲಕ್ಷ ರೂಪಾಯಿ ಸಾಲ ಮಾಡಿ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಆದರೆ ಈಗ ಮದುವೆ ಬಳಿಕ ಹುಡುಗನ ಮನೆಯಿಂದ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿಗಳು ದೂರಿನಲ್ಲಿ ತಿಳಿಸಿದ್ದಾರೆ.
ಅತ್ತೆ ಮೋಕ್ಷರಾಣಿ, ಅಜ್ಜಿ ರಾಣಿಕಮ್ಮ ಹಾಗೂ ಅಂತೋಣಿಸ್ವಾಮಿ ಎಂಬುವವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನಾವು ಸಾಲ ಮಾಡಿ ಕಟ್ಟಿದ್ದ ಮನೆಯನ್ನು ಬಿಟ್ಟುಕೊಡುವಂತೆ ಹಿಂಸೆ ನೀಡುತ್ತಿದ್ದು, ಈ ಹಿನ್ನೆಲೆ ನಮ್ಮ ಸಹಾಯಕ್ಕೆ ಪೋಲಿಸರಿಗೆ ತಿಳಿಸಿದರೆ ಅವರು ಸಹ ಸೆಪ್ಟೆಂಬರ್ 10ರ ಒಳಗೆ ಮನೆ ಖಾಲಿ ಮಾಡಿ ಎಂದು ನಮ್ಮ ವಿರುದ್ಧವೇ ನಿಂತಿದ್ದಾರೆ. ಹೀಗಾದರೆ ನಾವು ಹೋಗುವುದು ಎಲ್ಲಿಗೆ ? ನಾವು ಬದುಕು ಕಟ್ಟಿಕೊಳ್ಳುವುದು ಹೇಗೆ? ಎನ್ನುವುದು ದಂಪತಿಗಳ ಪ್ರಶ್ನೆ.
ನಾವು ಕಷ್ಟಪಟ್ಟು ಬದುಕು ಕಟ್ಟಿಕೊಂಡ ಬದುಕು ಇದು. ಈಗ ನಮ್ಮನ್ನು ಬೀದಿಪಾಲು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ಬದುಕುವುದು ಕಷ್ಟವಾಗುತ್ತದೆ. ಹೀಗಾಗಿ ನಮಗೆ ಸಾಯಲಿಕ್ಕಾದರೂ ಅನುಮತಿ ಕೊಡಿ. ನಮ್ಮಿಬ್ಬರ ಮಕ್ಕಳು ಮತ್ತು ನಾವು ಸಾವಿಗೆ ಶರಣಾಗಿ ಬದುಕನ್ನು ಅಂತ್ಯಗೊಳಿಸುತ್ತೇವೆ ಎಂದು ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಚಾಮರಾಜನಗರದ ಡಿಸಿಗೆ ಪತ್ರ ಬರೆದಿರುವ ಬಾಣಂತಿ ಲ್ಯಾನ್ಸಿ ಲೀನಾ ಹಾಗೂ ಅರುಳ್ ಸೆಲ್ವ ದಂಪತಿ.