ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ಅಭಿನಯ ಚಕ್ರವರ್ತಿ ಹಾಗೂ ಬಾದ್ಷಾ ಕಿಚ್ಚ ಸುದೀಪ್ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಹೊಸ ಸಿನಿಮಾಗಳ ಅಪ್ಡೇಟ್ನೊಂದಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ಪ್ರತಿಬಾರಿ ಮನೆಯ ಮುಂದೆ ಸುದೀಪ್ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಹಾರ-ತುರಾಯಿ, ಕೇಕ್ ಮತ್ತು ಗಿಫ್ಟ್ ಸೇರಿದಂತೆ ಯಾವುದನ್ನು ತೆಗೆದುಕೊಂಡು ಬರಬೇಡಿ, ಅದೇ ಹಣದಲ್ಲಿ ನಿರಾಶ್ರಿತರಿಗೆ ಏನಾದರೂ ಸಹಾಯ ಮಾಡಿ ಎಂದು ಕೋರಿದ್ದರು. ಈ ಬಾರಿಯು ಇದೇ ಮನವಿಯನ್ನು ಮಾಡಿದ್ದರು. ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನುಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಇಸ್ರೋ ಇನ್ನೊಂದು ಸಾಹಸ : ಸೂರ್ಯಯಾನ ಉಡಾವಣೆಗೆ ಕ್ಷಣಗಣನೆ!
ನಿನ್ನೆ (ಸೆ.01) ರಾತ್ರಿಯೇ ನಂದಿ ಲಿಂಕ್ ಗ್ರೌಂಡ್ಸ್ಗೆ ಜಮಾಯಿಸಿದ ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ತುಂಬಿಕೊಂಡು, ಶುಭ ಹಾರೈಸಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ತನ್ನ ಮೇಲಿ ಇಟ್ಟಿರುವ ಪ್ರೀತಿಗೆ ನಾನು ಸದಾ ಋಣಿ ಎಂದು ಹೇಳುವ ಮೂಲಕ ಕಿಚ್ಚ ಕೂಡ ಅಭಿಮಾನಿಗಳ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.

ಈ ಬಾರಿಯ ಸರ್ಪ್ರೈಸ್ ಏನೆಂದರೆ ಬರೋಬ್ಬರಿ 9 ವರ್ಷಗಳ ಬಳಿಕ ನಟ ಸುದೀಪ್ ಮತ್ತೆ ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ. ಕಿಚ್ಚನ 47ನೇ ಸಿನಿಮಾವನ್ನು ತಾವೇ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾವನ್ನು ಕೆಆರ್ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜು ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ.



