ಬೆಂಗಳೂರು : ಕುಮಾರಣ್ಣ ಅವರು ವಿಧಾನಸೌಧದಲ್ಲಿ ಹೇಗೆ ಘರ್ಜಿಸ್ತಾರೆ, ಹಾಗೆಯೇ ಈಗಲೂ ಇದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಹೆಚ್ಡಿಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳು, ಜನಪ್ರಿಯ ನೇತಾರ ಕುಮಾರಣ್ಣ ಆರೋಗ್ಯ ಉತ್ತಮವಾಗಿದೆ ಎಂದರು.
ನಾನು ನಿನ್ನೆಯೇ ನೋಡಲು ಬಂದಿದ್ದೆ. ವೈದ್ಯರ ಸಲಹೆ ಇದ್ದಿದ್ದರಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ, ಇಂದು ಭೇಟಿಯಾದೆ. ಮತುಕತೆ ಎಲ್ಲವೂ ನಾರ್ಮಲ್ ಇದೆ. ಅವರಿಗೆ ವಿಶ್ರಾಂತಿ ಹೇಳಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ಗೆ ಹೇಳಿದ್ದಾರೆ. ಕುಮಾರಣ್ಣ ನನಗೆ ಆಸ್ಪತ್ರೆಗೆ ಸೇರಿದ್ದಾರೆ ಅನಿಸ್ತಿಲ್ಲ ಎಂದು ಹೇಳಿದರು.
ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ
ಕಾವೇರಿ ನೀರು ವಿವಾದ ವಿಚಾರವಾಗಿ ಮಾತನಾಡಿದ ಅವರು, ಕಳೆದ ಮೇ ನಲ್ಲಿ ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ನಾನು ಅವರಿಗೆ ಎಚ್ಚರಿಸಿದ್ದೆ. ಜೂನ್ ಮೊದಲೇ ಹೇಳಿದ್ದೆ. ಮುಂಗಾರು ಈ ಬಾರಿ ಕೈ ಕೊಡಲಿದೆ ಅಂತ. ಕಾವೇರಿ ಮಂಡಳಿಗೆ ಹೇಳಿ ಈ ಬಾರಿ ನೀರು ಕೊಡಲು ಸಾಧ್ಯವಿಲ್ಲ ಅಂತ ಅರ್ಜಿ ಹಾಕಿಕೊಳ್ಳುವಂತೆ ಹೇಳಿದ್ದೆ. ಜೂನ್, ಜುಲೈ ತಿಂಗಳು ಕೊಡಲಾಗಲ್ಲ ಅಂತ ಹೇಳಿ ಅಂದಿದ್ದೆ. ಸರ್ಕಾರ ಇಷ್ಟಾದ್ರೂ ಎಚ್ಚೆತ್ತುಕೊಳ್ಳಲಿಲ್ಲ ಎಂದು ಬೇಸರಿಸಿದರು.
ಇದನ್ನೂ ಓದಿ : ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು
ಆಗಸ್ಟ್ ತಿಂಗಳಲ್ಲೇ ಬರಗಾಲ
15 ದಿನ 5,000 ಕ್ಯುಸೆಕ್ಸ್ ನೀರು ಬಿಡುವಂತೆ ಸೂಚಿಸಿದೆ. 11,000 ಕ್ಯುಸೆಕ್ಸ್ ಗೆ ಒಂದು ಟಿಎಂಸಿ(TMC). ಹಾಗಾದ್ರೆ, ಲೆಕ್ಕ ಹಾಕಿ ಎಷ್ಟು ನೀರು ಹೋಗಲಿದೆ ಅಂತ. ಆಗಸ್ಟ್ ತಿಂಗಳಲ್ಲೇ ಬರಗಾಲದ ರೀತಿ ಇದೆ. ಮಳೆಯನ್ನೇ ನಂಬಿದ್ದು ರೈತರು ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಹೋರಾಟ ಮಾಡಿದ್ದೇವೆ
ಆಲ್ ಪಾರ್ಟಿ ಮೀಟಿಂಗ್ ಕರೀತೀನಿ ಅಂತ ಹೇಳಿದ್ದಾರೆ. ಡೆಲಿಗೇಷನ್ ಕರ್ಕೊಂಡು ಕೇಂದ್ರಕ್ಕೆ ಹೋಗ್ತೀನಿ ಅಂತಾರೆ. ಕರ್ನಾಟಕದ ಜನರ ಪರವಾಗಿ ಕೆಲಸ ಮಾಡಿ. ಕೇಂದ್ರದ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಬೇಡಿ. ನಾವು ಮಂಡ್ಯದಲ್ಲಿ ಹೋರಾಟ ಮಾಡಿದ್ದೇವೆ. ಕಾವೇರಿ ನಂಬಿರೋ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಜನರಿಗಾಗಿ ಹೋರಾಟ ಮಾಡುತ್ತೇವೆ ಎಂದರು.