ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಶಕ್ತಿಯೋಜನೆಯಿಂದಾಗಿ ಖಾಸಗಿ ಸಾರಿಗೆ ಕ್ಷೇತ್ರದಕ್ಕೆ ಬಾರಿ ಹೊಡೆತ ಉಂಟಾಗಿದ್ದು, ಖಾಸಗಿ ಸಾರಿಗೆಗಳ ಸಮಸ್ಯೆ ನಿವಾರಿಸಲು ಮುಂದಾಗದ ಸರ್ಕಾರದ ಧೋರಣೆ ಖಂಡಿಸಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಗುರುವಾರ ಒಕ್ಕೂಟದ ಸದಸ್ಯ ಸಂಘಟನೆಗಳ ಪ್ರಮುಖರು ಸಭೆ ನಡೆಸಿ ಬಂದ್ ನಡೆಸಲು ದಿನಾಂಕ ನಿಗದಿ ಮಾಡಲಾಗುತ್ತದೆ.
ಕೊರೋನಾ ಸೋಂಕಿನ ಕಾರಣದಿಂದಾಗಿ ಮೊದಲೇ ನಷ್ಟದಲ್ಲಿದ್ದ ಖಾಸಗಿ ಸಾರಿಗೆ ಕ್ಷೇತ್ರವು, ಶಕ್ತಿ ಯೋಜನೆಯಿಂದಾಗಿ ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ. ಹೀಗಾಗಿ ಖಾಸಗಿ ಬಸ್, ಆಟೋ, ಟ್ಯಾಕ್ಸಿ ಚಾಲಕರು, ಮಾಲೀಕರಿಗೆ ನೆರವಾಗಲು ಸರ್ಕಾರ ಯೋಜನೆ ರೂಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದಿಂದ ಸಾರಿಗೆ ಬಂದ್ ನಡೆಸಲು ಜುಲೈ ತಿಂಗಳಲ್ಲೇ ನಿರ್ಧರಿಸಲಾಗಿತ್ತು.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣ: ಟರ್ಮಿನಲ್ 2 ರಲ್ಲಿ ವಿಮಾನ ಹಾರಾಟ ರದ್ದು!
ಅದಾದ ನಂತರ ಆಗಸ್ಟ್ 30ರೊಳಗೆ ಮುಖ್ಯಮಂತ್ರಿಗಳು ಖಾಸಗಿ ಸಾರಿಗೆ ಉದ್ಯಮಕ್ಕೆ ಪರಿಹಾರ ಕ್ರಮ ಘೋಷಿಸಬೇಕು ಎಂದು ಒಕ್ಕೂಟ ಗಡುವು ನೀಡಿತ್ತು. ಆದರೆ, ಸರ್ಕಾರದ ಕಡೆಯಿಂದ ಯಾವುದೇ ನಿರ್ಧಾರ ಪ್ರಕಟವಾಗದ ಕಾರಣ, ಗುರುವಾರ ಒಕ್ಕೂಟದ ಸದಸ್ಯ ಸಂಘಟನೆಗಳು ಸಭೆ ನಡೆಸಲಿವೆ. ಈ ವೇಳೆ ಯಾವ ದಿನದಂದು ಸಾರಿಗೆ ಬಂದ್ ನಡೆಸಬೇಕು ಎಂಬ ಕುರಿತು ದಿನಾಂಕ ನಿಗದಿ ಮಾಡಲಾಗುತ್ತಿದೆ.