ಬೆಂಗಳೂರು : ರೈತರ ಪ್ರತಿಭಟನೆಯ ನಡುವೆಯೂ ಕಾಂಗ್ರೆಸ್ ಸರ್ಕಾರವು ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್(KRS) ಜಲಾಶಯದಿಂದ ಕಾವೇರಿ ನದಿಗೆ 7,279 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ.
ನಿನ್ನೆ ಕೆಆರ್ಎಸ್(KRS)ನಿಂದ ತಮಿಳುನಾಡಿಗೆ 4448 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸದ್ಯ ಕೆಆರ್ಎಸ್(KRS) ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿದೆ. ಗರಿಷ್ಠ 124.80 ಅಡಿ ನೀರಿನ ಮಟ್ಟ ಹೊಂದಿರುವ ಕೆಆರ್ಎಸ್(KRS) ಜಲಾಶಯದ ಇಂದಿನ ನೀರಿನ ಮಟ್ಟ 100.96 ಅಡಿ ಇದೆ.
ಕರ್ನಾಟಕದಲ್ಲೇ ಮಳೆ ಕೊರತೆಯಿಂದ ನೀರಿನ ಅಭಾವ ಉಂಟಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರವು ಕೆಆರ್ಎಸ್(KRS) ಜಲಾಶಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದೆ. ಇದರ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರವು ತಮಿಳುನಾಡಿಗೆ ರಾತ್ರೋರಾತ್ರಿ ಹೆಚ್ಚುವರಿ ನೀರು ಹರಿಬಿಟ್ಟಿದೆ. ಹೀಗಾಗಿ, ಹೋರಾಟದ ರೂಪುರೇಷೆ ಕುರಿತು ಸಭೆ ಇಂದು ರೈತರು ಸಭೆ ನಡೆಸಲು ಮುಂದಾಗಿದ್ದಾರೆ.
ಕಾವೇರಿದ ಹೋರಾಟಗಾರರ ಕಿಚ್ಚು
ಕಾವೇರಿ ನೀರು ಬಿಡಲು ಪ್ರಾಧಿಕಾರ ಆದೇಶ ಕೊಟ್ಟಿರುವ ಹಿನ್ನಲೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಭೂಮಿ ತಾಯಿ ಹೋರಾಟ ಸಮಿತಿ ಹೋರಾಟಗಾರರು ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ದ ಧಿಕ್ಕಾರ ಕೂಗಿ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. ರೈತ ಹೋರಾಟಗಾರ ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.