ಬೆಳಗಾವಿ: ಮದುವೆ ಮನೆಯಲ್ಲಿ ಊಟ ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಈ ಪೈಕಿ ಒಬ್ಬರು ಕಣ್ಣೀನ ದೃಷ್ಟಿಯನ್ನು ಕಳೆದುಕೊಂಡಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಬಾಬಾಸಾಹೇಬ್ ಬೇಗ್(32) ದೃಷ್ಟಿ ಕಳೆದುಕೊಂಡ ವ್ಯಕ್ತಿ, ಮದುವೆ ಊಟ ಮಾಡಿ ಮನೆಗೆ ಬಂದಿದ್ದ ಬೇಗ್ ಬಳಿಕ ದಿಢೀರ್ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದರು, ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ತಮ್ಮ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಚೆಸ್ ತಾರೆ ಪ್ರಜ್ಞಾನಂದಗೆ ಅದ್ದೂರಿ ಸ್ವಾಗತ!
ಈ ಕುರಿತು ಚಿಕ್ಕೋಡಿ ಆಸ್ಪತ್ರೆಯ ತಜ್ನ ವೈದ್ಯ ಡಾ.ವಿವೇಕ್ ಹೊನ್ನಳ್ಳಿ ಮಾತನಾಡಿದ್ದು ಘಟನೆ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಪೈಕಿ ಒಬ್ಬರಿಗೆ ಈ ಪ್ರಕರಣಕ್ಕೂ ಮುನ್ನ ದೃಷ್ಟಿದೋಷ ಇತ್ತು. ಘಟನೆಯ ಬಳಿಕ ಈಗ ಆ ರೋಗಿ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಮತ್ತೋರ್ವರಿಗೆ ಬಿಪಿ ಲೋ ಆದ ಹಿನ್ನೆಲೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ನಿನ್ನೆ ಒಟ್ಟು 91 ಜನರು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಬಹುತೇಕ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸದ್ಯ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ 55 ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಇವರಲ್ಲಿ ಒಂಬತ್ತು ವರ್ಷದೊಳಗಿನ ಮೂರು ಮಕ್ಕಳು, 60 ವರ್ಷ ಮೇಲ್ಪಟ್ಟ 8 ವೃದ್ಧರಿದ್ದಾರೆ.
ನಾಳೆಯವರೆಗೂ ತೀವ್ರನಿಗಾವಹಿಸಿ ಬಳಿಕ ಡಿಸ್ಚಾರ್ಜ್ ಮಾಡುತ್ತೇವೆ ಎಂದ ಡಾ.ವಿವೇಕ್ ಹೊನ್ನಳ್ಳಿ ತಿಳಿಸಿದ್ದಾರೆ.