ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಹಾಗೂ ಪ್ರಚೋದನಾಕಾರಿ ಸುದ್ದಿಗಳ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಠಾಣಾ ಮಟ್ಟದಿಂದಲೇ ತರಬೇತಿ ಪಡೆದ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಲತಾಣಗಳಲ್ಲಿ ಬರುವಂತಹ ಕೆಲವೊಂದು ಪೋಸ್ಟ್‌ಗಳು ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಸಮಸ್ಯೆಗಳಿಗೆ ಕಾರಣವಾಗಿರುತ್ತವೆ ಎಂಬುದು ಕಂಡುಬಂದಿದೆ. ಈ ರೀತಿಯ ಪೋಸ್ಟ್‌ಗಳಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಬೆಂಗಳೂರು ನಗರದಲ್ಲಿ ಠಾಣಾ ಮಟ್ಟದಿಂದ ಆಯುಕ್ತರ ಕಚೇರಿವರೆಗೆ ಮೂರು ಹಂತದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹೊಸ ಲೋಗೋದಡಿಯಲ್ಲಿ ಇಂಡಿಯಾ ಮೈತ್ರಿಕೂಟ ಸ್ಪರ್ಧೆ
ಪ್ರತಿಯೊಂದು ಠಾಣೆಯಲ್ಲಿ ತಾಂತ್ರಿಕವಾಗಿ ಪರಿಣಿತಿ ಹೊಂದಿದ ಇಬ್ಬರು ಸಿಬ್ಬಂದಿ ಆಯ್ಕೆ ಮಾಡಿ ತಂಡ ರಚಿಸಲಾಗಿದೆ. ಡಿಸಿಪಿ ಕಚೇರಿಯಲ್ಲಿ ಮತ್ತೊಂದು ಸಣ್ಣ ಮಟ್ಟದ ತಂಡ ಇದ್ದರೆ, ಆಯುಕ್ತರ ಕಚೇರಿಯಲ್ಲಿ ದೊಡ್ಡ ಮಟ್ಟದ ತಂಡ ಕಾರ್ಯನಿರ್ವಹಿಸಲಿವೆ ಎಂದು ವಿವರಿಸಿದರು.
ಮೂರು ತಂಡಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಲಿದ್ದು, ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಡಲಿವೆ. ಸುಳ್ಳು ಸುದ್ದಿಗಳು ವೈರಲ್ ಆದರೆ ಕೂಡಲೇ ಅವುಗಳನ್ನು ಪರಿಶೀಲಿಸಲಾಗುತ್ತದೆ. ಫ್ಯಾಕ್ಟ್ ಚೆಕ್ ಮಾಡಿ ಸ್ಪಷ್ಟಿಕರಣ ನೀಡಲಾಗುತ್ತದೆ. ಈ ಮೂಲಕ ಜನರಿಗೆ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಿಕೊಡುತ್ತವೆ. ಈಗಾಗಲೆ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡಲಾಗಿದೆ ಎಂದು ಹೇಳಿದರು.