ಬೆಳಗಾವಿ : ಹಗರಣಗಳ ತನಿಖೆಗೆ ಆದೇಶಿಸಿ ಮಾಜಿ ಸಚಿವರುಗಳನ್ನು ಹೆದರಿಸುತ್ತಿದ್ದೀರಾ? ಎಂಬ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ‘ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬಂದ್ರೂ, ಬರದಿದ್ರೂ ತನಿಖೆ ಆಗುತ್ತದೆ’ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಹೆದರಿಸಲು ಡಾ.ಕೆ ಸುಧಾಕರ್ ಅವರೇನೂ ಶಾಸಕರಿದ್ದಾರಾ? ಸರ್ಕಾರ ಬೀಳಿಸ್ತಾರಾ? ಅವರೇನೂ ಈಗ ಖಾಲಿ ಇದಾರೆ. ಹೆದರಿಸುವಂತದೇನಿಲ್ಲಾ, ಅವರ ಮೇಲೆ ಆರೋಪ ಇದೆ ತನಿಖೆ ಆಗಲಿ. ಅವರನ್ನು ಕರೆದುಕೊಂಡು ಬರಲು ಏನೂ ತಂತ್ರಗಾರಿಕೆ ಇಲ್ಲ. ಒಬ್ಬರ ಮೇಲೆ ಇಲ್ಲಾ, ಇನ್ನೂ ಬಹಳಷ್ಟು ಜನರ ಮೇಲೆ ತನಿಖೆ ಆಗಬೇಕು’ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ತನಿಖೆ ಮಾಡೋದು ಸೂಕ್ತ
ಬಿಜೆಪಿ ಸರ್ಕಾರ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ಮಾಡಲೇಬೇಕು. ನಾವೇ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದೆವು. ಕೋವಿಡ್-19ನಲ್ಲಿ 10 ರೂಪಾಯಿ ಸಿಗುವ ವಸ್ತುವಿಗೆ 100 ರೂಪಾಯಿಗೆ ಖರೀದಿ ಮಾಡಿದ್ದಾರೆ. ಈ ಬಗ್ಗೆ ನಾವೇ ಆರೋಪ ಮಾಡಿದ್ವಿ, ತನಿಖೆ ಮಾಡೋದು ಸೂಕ್ತ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ತಂದೆ ಇದ್ದಂತೆ : ಮಧು ಬಂಗಾರಪ್ಪ
ನಮ್ಮ ಬಳಿ ಅಧಿಕಾರ ಇದೆ
ಹಳೆಯದು ಲಿಮಿಟ್ ಮೀರಿ ಹಗರಣ ಆಗಿದೆ. ತನಿಖೆಯಿಂದ ಎಷ್ಟಾಗಿದೆ ಗೊತ್ತಾಗುತ್ತೆ. ಹಗರಣದಲ್ಲಿ ಸಂಬಂಧಪಟ್ಟ ಹಿಂದಿನ ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಿರುತ್ತಾರೆ. ಸಂಪೂರ್ಣ ತನಿಖೆಯಾದ ಬಳಿಕ ಎಲ್ಲವೂ ಗೊತ್ತಾಗುತ್ತೆ. ಎಸ್‌ಐಟಿಗೆ ಒಪ್ಪಿಸುತ್ತಿದ್ದೇವೆ, ಲೋಕಾಯುಕ್ತ ಮಾಡುತ್ತಿದೆ. ಅಧಿಕಾರಿಗಳ ಹಂತದಲ್ಲಿ ವಿಚಾರಣೆ ಆಗುತ್ತಿದೆ. ಆರೋಪ ಮಾಡಿದವರು, ನಾವು ನಮ್ಮ ಬಳಿ ಅಧಿಕಾರ ಇದೆ ಅದನ್ನು ಒಂದು ಹಂತಕ್ಕೆ ಒಯ್ಯುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.