ಬಾಕು: ಚೆಸ್ ವಿಶ್ವಕಪ್ನಲ್ಲಿ ಭಾರತದ ಯುವ ಚದುರಂಗ ಪ್ರತಿಭೆ ಆರ್. ಪ್ರಜ್ಞಾನಂದ ನಿರ್ಣಾಯಕ ಹಂತದಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ವಿಶ್ವ ನಂ. 1 ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದ ಟೈ ಬ್ರೇಕರ್ನಲ್ಲಿ ಎಡವಿದ ಪ್ರಜ್ಞಾನಂದ 0.5-1.5ರಿಂದ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.
ಫೈನಲ್ ಪಂದ್ಯ ಟೈಬ್ರೇಕರ್ಗೆ ವಿಸ್ತರಿಸಿದಾಗ ಪ್ರಜ್ಞಾನಂದ ಅವರೇ ಫೇವರಿಟ್ ಎಂದು ಭಾವಿಸಲಾಗಿತ್ತು. ಯಾಕೆಂದರೆ ಈ ಮುನ್ನ ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ನಲ್ಲೂ ಅವರು ಟೈಬ್ರೇಕರ್ನಲ್ಲೇ ಗೆಲುವು ಒಲಿಸಿಕೊಂಡಿದ್ದರು ಮತ್ತು ರ್ಯಾಪಿಡ್ ಚೆಸ್ ಅವರ ನೆಚ್ಚಿನ ಆಟವೂ ಆಗಿತ್ತು.
ಆದರೆ ಫೈನಲ್ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾಗ ‘ಸೈನಿಕ’ನನ್ನು ಎಫ್5ನಲ್ಲಿ ನಿಲ್ಲಿಸುವ ಮೂಲಕ ಪ್ರಜ್ಞಾನಂದ ಬಹುದೊಡ್ಡ ಎಡವಟ್ಟು ಮಾಡಿಕೊಂಡರು. ಇದು ಕಾರ್ಲ್ಸೆನ್ಗೆ ಗೆಲುವು ಸಾಧಿಸಲು ನೆರವಾಯಿತು. ಇದರಿಂದಾಗಿ ಪ್ರಜ್ಞಾನಂದಗೆ ಪಂದ್ಯ ಕೈಜಾರುತ್ತಿರುವ ಅರಿವು ಕೂಡ ಆಗಿ ಗೆಲುವು ಬಿಟ್ಟುಕೊಟ್ಟರು.