ಬೆಂಗಳೂರು : ಚಂದ್ರಯಾನ-3 ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಸಕ್ಸಸ್ ಅನ್ನು 140 ಕೋಟಿ ಭಾರತೀಯರು ಹೆಮ್ಮೆಯಿಂದ ಸಂಭ್ರಮಿಸುತ್ತಿದ್ದಾರೆ.
ವಿಶ್ವದ ವಿವಿಧ ದೇಶಗಳ ಗಣ್ಯರು ಭಾರತದ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ. ಇದಕ್ಕೆ ಗೂಗಲ್ ಡೂಡಲ್ ಸಹ ಹೊರತಾಗಿಲ್ಲ.
ಭಾರತ ಮತ್ತು ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಸಾಧನೆಯನ್ನು ಗೂಗಲ್ ಡೂಡಲ್ ಗೌರವಿಸಿ ಸಲಾಂ ಹೇಳಿದೆ. ಈ ಅವಿಸ್ಮರಣೀಯ ಸಾಧನೆಗೆ ಧನ್ಯವಾದಗಳನ್ನು ತಿಳಿಸಿದೆ.
ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3(ಬಾಹ್ಯಾಕಾಶ ನೌಕೆ) ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾದ ಮೊದಲ ದೇಶ ಎಂಬ ಶ್ರೇಯಕ್ಕೆ ಭಾರತ ಪಾತ್ರವಾಗಿದೆ. ಅಲ್ಲದೆ, ಚಂದ್ರನ ಮೇಲೆ ಮೃದುವಾಗಿ ನೌಕೆಯನ್ನು ಇಳಿಸಿದ 4ನೇ ದೇಶವೂ ಹೌದು. ಇದಕ್ಕೂ ಮೊದಲು ಅಮೆರಿಕ, ರಷ್ಯಾ ಹಾಗೂ ಚೀನಾ ಈ ಸಾಧನೆ ಮಾಡಿವೆ.
ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸುದಿನ
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಳಿದು ಇತಿಹಾಸ ಬರೆದಿದೆ. 23-08-2023ರ ಸಂಜೆ 6.04ಕ್ಕೆ ಸರಿಯಾಗಿ ಲ್ಯಾಂಡರ್ ಚಂದಿರನನ್ನು ಸ್ಪರ್ಶಿಸಿತು. ಈ ಬಾರಿ ಅದು ಶಾಂತ ಚಿತ್ತದಿಂದ ದೃಢ ಹೆಜ್ಜೆಯಿಟ್ಟಿತು. ಈ ಮೂಲಕ ವಿಶ್ವದ ಇತಿಹಾಸದಲ್ಲಿಯೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸುದಿನವಾಯಿತು.