ಬೆಂಗಳೂರು : ಅನ್ನಭಾಗ್ಯ ಯೋಜನೆಯ ಹೆಚ್ಚುವರಿ 5 ಕಿಲೋ ಅಕ್ಕಿಯ ಹಣ ಆಗಸ್ಟ್ 25 ಅಥವಾ 26ರೊಳಗೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ತಿಂಗಳು ಡಿಬಿಟಿ ವಿಚಾರವಾಗಿ ಹಣ ಹಾಕುವುದು ತಡವಾಯಿತು. ಆಹಾರ ಇಲಾಖೆಯಲ್ಲಿ 2,181 ಖಾಲಿ ಹುದ್ದೆ ಭರ್ತಿಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೋಟ್ಯಂತರ ಮೌಲ್ಯದ ಅಕ್ಕಿ ನಾಪತ್ತೆ
ಕೋಟ್ಯಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಬಂಟ್ವಾಳದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಅಕ್ಕಿ ನಾಪತ್ತೆಯಾಗಿದ್ದು, 1.32 ಕೋಟಿ ಮೌಲ್ಯದ 3,892 ಕ್ವಿಂಟಾಲ್ ಅಕ್ಕಿ ನಾಪತ್ತೆಯಾದ ಬಗ್ಗೆ ಗೋದಾಮು ವ್ಯವಸ್ಥಾಪಕ ವಿಜಯ್ ವಿರುದ್ಧ ದ.ಕ. ಜಿಲ್ಲಾ ಪಡಿತರ ಇಲಾಖೆಯ ವ್ಯವಸ್ಥಾಪಕ ಶರತ್ ಕುಮಾರ್ ಎಂಬುವರು ದೂರು ದಾಖಲಿಸಿದ್ದಾರೆ.
ಇಲಾಖೆಯ ಫಿಸ್ಟ್ ತಂತ್ರಾಂಶದಲ್ಲಿ ದಾಸ್ತಾನು ಪರಿಶೀಲಿಸಿದಾಗ ಗೋಲ್ಮಾಲ್ ಆಗಿರುವುದು ಪತ್ತೆಯಾಗಿದೆ. ಈ ಸಂಬಂಧ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಹೊರಗೆ ಮಾರಾಟ ಮಾಡಿರುವ ಶಂಕೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.