ಬೆಂಗಳೂರು : ಆಕ್ಷೇಪಾರ್ಹ ಪದ ಬಳಕೆ ಹಿನ್ನಲೆಯಲ್ಲಿ ನಟ ಉಪೇಂದ್ರ ಬಂಧನಕ್ಕೆ ದಲಿತ ಸಂಘಟನೆಗಳು ಒತ್ತಾಯಿಸುತ್ತಿರುವ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಟ ಉಪೇಂದ್ರ ತಪ್ಪು ಮಾಡಿರುವುದನ್ನ ಒಪ್ಪಿಕೊಂಡಿದ್ದಾರೆ. ದುರುದ್ದೇಶದಿಂದ ಹೇಳಿಲ್ಲ ಅಂತ ವಿಷಾಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಕಾನೂನು ಬೇರೆ ದೃಷ್ಟಿಯಲ್ಲೇ ನೋಡುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ಕ್ರಮವಹಿಸುತ್ತಾರೆ. ಕಾನೂನು ಇದೆ, ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ನಟ ಉಪೇಂದ್ರ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅಂತ ಬೇಧ-ಭಾವ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನಾನು ಸಿಎಂ ಭೇಟಿಯಾದ ಉದ್ದೇಶವೇ ಬೇರೆ, ಈ ವಿಚಾರಕ್ಕೆ ಭೇಟಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಮುನಿಯಪ್ಪ ಹೇಳಿಕೆಗೆ ಪರಂ ತಿರುಗೇಟು
ಎರಡೂವರೆ ವರ್ಷದ ಬಳಿಕ ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂಬ ಕೆ.ಹೆಚ್ ಮುನಿಯಪ್ಪ ಹೇಳಿಕೆಗೆ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ. ನಾನೇಕೆ ಸಚಿವ ಸ್ಥಾನ ಬಿಟ್ಟು ಕೊಡಬೇಕು. ನನಗೆ ಅನ್ವಯಿಸಲ್ಲ. ಅವರ ಹೇಳಿಕೆಗೆ ನನ್ನ ಸಹಮತ ಇಲ್ಲ. ಅವರು ಹೇಳಿರೋದು ತಪ್ಪೇನಿಲ್ಲ, ಅದು ಅವರ ವೈಯಕ್ತಿಕ ಎಂದು ಕುಟುಕಿದ್ದಾರೆ.