ಬೆಂಗಳೂರು : ವಲಸೆ ಶಾಸಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ವದಂತಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವವರು ಯಾರು ಬೇಕಾದ್ರೂ ಬರಲಿ. ಬರುವವರು ಪಕ್ಷದ ಸಿದ್ಧಾಂತ, ತತ್ವಗಳಿಗೆ ಒಪ್ಪಿ ಬರಲಿ. ನಾವೇನು ಆಪರೇಷನ್ ಹಸ್ತ ಮಾಡ್ತಿಲ್ಲ. ಯಾರ ಮನೆ ಬಾಗಿಲಿಗೂ ಹೋಗಿ ಕಾಯ್ತಿಲ್ಲ. ಬರ್ತಾರೆ ಅಂತ ಯಾರೂ ಜೆಟ್ ರೆಡಿ ಮಾಡಿಕೊಂಡಿಲ್ಲ. ಬರುವವರು ನಮ್ಮ ಸಿದ್ದಾಂತ ಒಪ್ಪಿ ಬರಲಿ, ಸ್ವಾಗತ ಮಾಡ್ತೀವಿ ಎಂದು ಪರೋಕ್ಷವಾಗಿಯೇ ಆಹ್ವಾನ ನೀಡಿದ್ದಾರೆ.
ಎರಡೂವರೆ ವರ್ಷ ಆದ ಬಳಿಕ ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂಬ ಸಚಿವ ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಮುನಿಯಪ್ಪ ಹೇಳಿದ್ರು, ಪರಮೇಶ್ವರ್ ಹೇಳಿದ್ರು ಅಥವಾ ಇನ್ಯಾರೋ ಹೇಳಿದ್ರು ಅಂತ ಬಿಡೋಕೆ ಆಗಲ್ಲ. ಅವರವರ ಅಭಿಪ್ರಾಯ ಅವರಿಗೆ. ಇನ್ಯಾರದ್ದೋ ಅಭಿಪ್ರಾಯಕ್ಕೆ ನಾವು ಮನ್ನಣೆ ಕೊಡಲು ಸಾಧ್ಯವಿಲ್ಲ. ಯಾರದ್ದೋ ಅಭಿಪ್ರಾಯ ಮುಖ್ಯ ಅಲ್ಲ. ಹೈಕಮಾಂಡ್ ನಿರ್ಧಾರವೇ ಪ್ರಸ್ತುತ. ಏನೇ ಆದೇಶ ಬಂದ್ರೂ ಹೈಕಮಾಂಡ್ ಕಡೆಯಿಂದಲೇ ಬರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉಪೇಂದ್ರ ತಪ್ಪು ಒಪ್ಪಿಕೊಂಡಿದ್ದಾರೆ : ಪರಮೇಶ್ವರ್
ಪಕ್ಷದ ತೀರ್ಮಾನವೇ ಫೈನಲ್
ಉಮಾಶ್ರೀ, ಸೀತಾರಾಂ, ಸುದಾಮದಾಸ್ ನಾಮನಿರ್ದೇಶನಕ್ಕೆ ಕಾರ್ಯಕರ್ತರ ಆಕ್ಷೇಪ ವಿಚಾರವಾಗಿ ಮಾತನಾಡಿ, ಸುದಾಮದಾಸ್, ಉಮಾಶ್ರೀ, ಸೀತಾರಾಂ ಅವರು ಪಕ್ಷಕ್ಕೆ ಅಳಿಲು ಸೇವೆ ಸಲ್ಲಿಸಿದ್ದಾರೆ. ನಾನು ಸಹ ಪಕ್ಷಕ್ಕೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಹೀಗಾಗಿ, ನನಗೂ ಒಂದು ಸ್ಥಾನ ನೀಡಿದ್ದಾರೆ. ಹೈಕಮಾಂಡ್ ನಿರ್ಧಾರ ಮಾಡಿದೆ. ಹೈಕಮಾಂಡ್ ಆದೇಶ ನಾವು ಗೌರವ ಕೊಡಬೇಕು. ಹಲವರಿಗೆ ಇದರಿಂದ ಅವಕಾಶ ಸಿಗದಿರಬಹುದು. ಆದ್ರೆ, ಪಕ್ಷದ ತೀರ್ಮಾನವೇ ಅಂತಿಮ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.