ಹಾಸನ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಶಿವಲಿಂಗೇಗೌಡ ಅವರನ್ನು ಮಂತ್ರಿ ಮಾಡೋಣ ಅಂದಿದ್ರು. ಆದರೆ, ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಬೇಸರಿಸಿದ್ದಾರೆ.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ದಂಪತಿ ಹಾಗೂ ಶಾಸಕ ಶಿವಲಿಂಗೇಗೌಡ ಅವರು ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿರುವ ಕೋಡಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರು ಫೋನ್ ಮಾಡಿದ್ರು. ನಿಮ್ಮಕಡೆ ಮಾತನಾಡಲ್ಲ ಅಂದೆ. ಯಾಕೆ ಗುರುಗಳೇ ಅಂದ್ರು. ಕೊಟ್ಟ ಮಾತಿಗೆ ತಪ್ಪಿದ್ದೀಯಾ, ಇನ್ ಏನಪ್ಪ ಮಾತನಾಡೋದು ಅಂದೆ. ನಾನು ಅವನನ್ನೇ ಕರ್ಕಂಡು ಬರ್ತಿನಿ ಅಂದಿದ್ದೀನಿ. ಇಬ್ಬರು ಒಂದು ಗಂಟೆ ಮಾತನಾಡಿದ್ವಿ ಆಗ ಶಿವಲಿಂಗೇಗೌಡರನ್ನು ಮಂತ್ರಿ ಮಾಡೋಣ ಅಂದಿದ್ರು ಎಂದು ಬೇಸರಿಸಿದ್ದಾರೆ.
ಗೌಡ್ರುನು ನಿಮ್ಮ ಜೊತೆ ಸೇರಿಸಿಕೊಳ್ಳಿ
ಚಲುವರಾಯಸ್ವಾಮಿ ಮಾತನಾಡಿ, ನಾನು ಶಾಸಕನಾಗಿ, ಮಂತ್ರಿಯಾಗಿ ಬರಬೇಕು ಎಂದು ಬಂದಿದ್ದೇನೆ ಎಂದರು. ಈ ವೇಳೆ ಶ್ರೀಗಳು, ಗೌಡ್ರುನು ನಿಮ್ಮ ಜೊತೆ ಸೇರಿಸಿಕೊಳ್ಳಿ ಎಂದರು. ಗೌಡ್ರನು ನಮ್ಮ ಜೊತೆ ಸೇರಿಸ್ಕೊಂಡು ಮಂತ್ರಿನೇ ಮಾಡೋಣ ಅಂತ ಆಗಿತ್ತು. ಅದೇನೋ ಅದೃಷ್ಟ ನೀವು ಸರಿಯಾಗಿ ಆಶೀರ್ವಾದ ಮಾಡಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
ಸುಧಾಕರ್ ಹೆಸ್ರು ಬಂದಿದ್ರಿಂದ ಬಿಟ್ಟೋಯ್ತು
ಇಲ್ಲ.. ಶಿವಲಿಂಗೇಗೌಡರನ್ನು ಮಂತ್ರಿ ಮಾಡಬೇಕು ಅಂದುಕೊಂಡಿದ್ವಿ. ಲಿಂಗಾಯಿತರು ಹಾಗೂ ಡಾ. ಸುಧಾಕರ್ ಹೆಸರು ಬಂದಿದ್ದರಿಂದ ಕೈಬಿಟ್ಟೋಯ್ತು. ಮಂತ್ರಿ ಮಾಡಬಹುದಿತ್ತು, ನಮ್ಮ ಪಾರ್ಟಿಲಿ ಎಲ್ಲಾ ಸೀನಿಯರ್ ಇದ್ದಾರೆ. ಸುಧಾಕರ್ ಇರ್ಲಿಲ್ಲಾ ಅಂದಿದ್ರೆ, ಕ್ಲಿಯರ್ ಆಗೋದು ಎಂದು ಚಲುವರಾಯಸ್ವಾಮಿ ಶ್ರೀಗಳಿಗೆ ತಿಳಿಸಿದರು.