Friday, May 10, 2024

ದೇಶ ವಿಭಜಿಸಿದವರು ಭಾರತ ಜೋಡೊ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ : ಬೊಮ್ಮಾಯಿ

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ವಿಭಜಿಸಿದವರು ಈಗ ಭಾರತ ಜೋಡೊ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌.

ಸ್ವಾತಂತ್ರ್ಯೋತ್ವವದ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಎಲ್ಲರಿಗೂ ಬೇಕು. ಸ್ವತಂತ್ರ ಅನ್ನುವ ಪದ ಎಲ್ಲರಿಗೂ ಇಷ್ಟ. ಮಕ್ಕಳು ಶಾಲೆಯ ಗುರುಗಳಿಂದ, ಅಪ್ಪ ಅಮ್ಮನಿಂದ ಸ್ವತಂತ್ರ ‌ಪಡೆಯಲು ಬಯಸುತ್ತಾರೆ. ತೆರಿಗೆದಾರರು ಸರ್ಕಾರದಿಂದ ಸ್ವಾತಂತ್ರ್ಯ ಪಡೆಯಲು ಬಯಸುತ್ತಾರೆ. ಆದರೆ, ನಾವು ಸರ್ವ ಸ್ವತಂತ್ರ ವಾಗಿ ಬದುಕಲು ಸಾಧ್ಯವಿಲ್ಲ. ಮನುಷ್ಯ ಸಂಘ ಜಿವಿ, ಮನೆ, ಊರು, ರಾಜ್ಯ ದೇಶ ಅಂತ ಕಟ್ಟಿಕೊಂಡಿದ್ದೇವೆ. ಎಲ್ಲರೂ ನಮ್ಮ ದೇಶದ ಮೇಲೆ ಯಾಕೆ ದಾಳಿ ಮಾಡುತ್ತಾರೆ ಎಂದರೆ, ಭಾರತ ಸಮೃದ್ಧವಾಗಿದೆ. ಹೀಗಾಗಿ ಮುಸ್ಲೀಮರು ಹಾಗೂ ಬ್ರಿಟೀಷರು ಒಂಬೈನೂರು ವರ್ಷ ಆಳಿದರು ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಕೇವಲ ರಾಜಕಾರಣಕ್ಕಾಗಿ ಎನ್‍ಇಪಿ ರದ್ದು ಮಾಡುವುದು ಅಕ್ಷಮ್ಯ ಅಪರಾಧ: ಬೊಮ್ಮಾಯಿ

ಎಲ್ಲ ಧರ್ಮಗಳು ಸಂಘರ್ಷದಿಂದ ಹುಟ್ಡಿಕೊಂಡಿವೆ. ಆದರೆ, ಹಿಂದೂ ಧರ್ಮ ಮಾತ್ರ ಸಂಸ್ಕಾರದಿಂದ ಹುಟ್ಟಿಕೊಂಡಿದೆ. ನಮ್ಮ ಇತಿಹಾಸದಲ್ಲಿ ಅನೇಕ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ರಾಣಿ ಚೆನ್ನಮ್ಮ, ರಾಯಣ್ಣ, ಬಾಲಬಂಗಾಧರ ತಿಲಕ, ಭಗತ್ ಸಿಂಗ್, ರಾಜಗುರು, ಇವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸುಭಾಶ್ಚಂದ್ರ ಬೋಸ್ ಕಾಂಗ್ರೆಸ್ ನವರಾಗಿದ್ದರೂ ಪಕ್ಷ ತೊರೆದು ಹೋರಾಟ ನಡೆಸಿದರು. ಅನೇಕ ಅನಾಮಧೆಯರಿದ್ದಾರೆ. ಇತಿಹಾಸದ ಸತ್ಯವನ್ನು ಹೇಳಲು ಮುಂದೆ ಬಂದಿಲ್ಲ. ಬ್ರಿಟಿಷರು ಭಾರತವನ್ನು ವಿಭಜಿಸಿದರು, ಕಾಂಗ್ರೆಸ್ ನವರು ಅಧಿಕಾರದ ಆಸೆಗೆ ದೇಶ ವಿಭಜನೆಗೆ ಒಪ್ಪಿಕೊಂಡರು. ಭಾರತ ಥೊಡೊ ಆಗಿನಿಂದಲೇ ಆರಂಭವಾಗಿದೆ. ಈಗ ಭಾರತ ಜೋಡೊ ಯಾತ್ರೆ ಮಾಡುತ್ತಾರೆ.‌ ಇದು ವಿಪರ್ಯಾಸ ಎಂದರು.

ಭಾರತ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ಪ್ರಾಣ‌ಕಳೆದುಕೊಂಡರು, ಅನೇಕ ಮಕ್ಕಳು ಅನಾಥರಾದರು. ಇಡಿ ಜಗತ್ತಿನಲ್ಲಿ ಅತ್ಯಂತ ಕರಾಳ ಇತಿಹಾಸ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಒಂದೇ ದಿನ ಸ್ವಾತಂತ್ರ್ಯ ಮತ್ತು ಒಂದೇ ದಿನ ವಿಭಜನೆ ಯಾವ ದೇಶದಲ್ಲಿಯೂ ಇಲ್ಲ ಎಂದರು.

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ 9 ವರ್ಷಗಳಿಂದ ಸಕಾರಾತ್ಮಕ ಆಡಳಿತ ನೀಡುತ್ತಿದ್ದಾರೆ. ಕಾಶ್ಮೀರದಲ್ಲಿ 370 ರದ್ದು ಮಾಡಿದ್ದಾರೆ. ವಿಜ್ಞಾನ ತಂತ್ರಜ್ಞಾನ, ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಿದ್ದಾರೆ. ಮೋದಿ ನಾಯಕತ್ವವನ್ನು ನಮ್ಮ ವಿರೋಧಿ ದೇಶಗಳೆ ಮೆಚ್ಚಿಕೊಳ್ಳುತ್ತಿವೆ. ಆದರೆ, ನಮ್ಮ ದೇಶದ ಕೆಲವು ನಾಯಕರು ವಿದೇಶಗಳಲ್ಲಿ ಹೋಗಿ ಭಾರತವನ್ನು ದ್ವೇಷಿಸುವ ಕೆಲಸ ಮಾಡಿದ್ದಾರೆ.

ಭಾರತದಲ್ಲಿ ಅಲ್ಪ ಸಂಖ್ಯಾತರು ಸುರಕ್ಷಿತರಾಗಿಲ್ಲ ಎಂದು ಹೇಳುತ್ತಾರೆ. ಆದರೆ, ಮುಸ್ಲೀಮರೇ ಬಹುಸಂಖ್ಯಾತರಾಗಿರುವ ದೇಶಗಳಲ್ಲಿ ಅವರ ಪರಸ್ಥಿತಿ ಏನಿದೆ ಎನ್ನುವುದನ್ನು ನೋಡಬೇಕು. ಸಮರ್ಥ ಭಾರತ ನಿರ್ಮಾಣ ಮಾಡುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಇಸ್ಲಾಂ ರಾಷ್ಟ್ರ ಮಾಡುವ ಪ್ರಯತ್ನ  ನಡೆಯುತ್ತಿದೆ. ಭಾರತಕ್ಕೆ ನರೇಂದ್ರ ಮೋದಿಯವರ ನಾಯಕತ್ವ ಅಗತ್ಯವಿದೆ. ಅವರ ಜೊತೆಗೆ ನಾವೂ ದೇಶದ ಭವಿಷ್ಯಕ್ಕಾಗಿ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತಿತರರು ಹಾಜರಿದ್ದರು.

RELATED ARTICLES

Related Articles

TRENDING ARTICLES