Wednesday, January 22, 2025

ಸ್ವಾತಂತ್ರ್ಯ ಬರೋ 12 ದಿನ ಮುಂಚೆ ನಾನು ಹುಟ್ಟಿದ್ದೀನಿ : ಸಿದ್ದರಾಮಯ್ಯ

ಬೆಂಗಳೂರು : ಶಾಲೆ ದಾಖಲೆ ಪ್ರಕಾರ ಸ್ವಾತಂತ್ರ್ಯ ಬರೋ 12 ದಿನ ಮುಂಚೆ ನಾನು ಹುಟ್ಟಿದ್ದೀನಿ. ಆದರೆ, ಇದು ನಿಜವಾದ ದಿನಾಂಕ ಅಲ್ಲ. ಶಾಲೆ ಮೇಸ್ಟ್ರು ಬರೆದುಕೊಂಡ ದಿನಾಂಕ ಅದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಚಂದ್ರ ಲೇಔಟ್​ನ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದು 77ನೇ ಸ್ವಾತಂತ್ರ್ಯ ದಿನಾಚರಣೆ, ನನಗೆ ಈಗ 76 ವರ್ಷ ವಯಸ್ಸು. ಅದೇನೇ ಇರಲಿ ಅದರ ಬಗ್ಗೆ ನಾನು‌ ಈಗ ಮಾತನಾಡಲ್ಲ ಎಂದು ತಮ್ಮ ವಯಸ್ಸಿನ ಬಗ್ಗೆ ಮತ್ತೊಮ್ಮೆ ಬಾಯಿಬಿಟ್ಟರು.

ರಾಜಕಾರಣಿಗಳಲ್ಲಿ ಸೇವಾ ಮನೋಭಾವ ಕಡಿಮೆ ಆಗುತ್ತಿದೆ. ಸಮಾಜ ಸುಧಾರಣೆ ಆಗಲು ರಾಜಕಾರಣಿಗಳ ಸೇವಾ ಮನೋಭಾವ ಜಾಸ್ತಿ ಆಗಬೇಕು. ಇಲ್ಲಿನ ವಿದ್ಯಾರ್ಥಿಗಳಲ್ಲಿ ಹಲವರು ರಾಜಕೀಯಕ್ಕೆ ಬರಬಹುದು. ರಾಜಕೀಯಕ್ಕೆ ಸೇವಾ ಮನೋಭಾವ ಇದ್ದರೆ ರಾಜಕಾರಣಕ್ಕೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ : ನನಗೆ ಬರ್ತ್ ಡೇ ಡೇಟ್ ಗೊತ್ತಿಲ್ಲ : ಸಿದ್ದರಾಮಯ್ಯ

ನಮ್ಮಪ್ಪನಿಗೆ ಗೊತ್ತೇ ಆಗಲಿಲ್ಲ

ನಾನು ಎಸ್ಸೆಸ್ಸೆಲ್ಸಿ ವರೆಗೂ ಫಸ್ಟ್ ಕ್ಲಾಸ್ ಬರ್ತಿದ್ದೆ. ಸೆಕೆಂಡ್ ಪಿಯುಸಿಯಿಂದ ಸೆಕೆಂಡ್ ಕ್ಲಾಸ್ ತಗೋತಿದ್ದೆ. ಲಾ ಓದೋವರೆಗೂ ಸೆಕೆಂಡ್ ಕ್ಲಾಸ್ ನಲ್ಲೇ ಬಂದೆ. ನಮ್ಮಪ್ಪನಿಗೆ ಗೊತ್ತೇ ಆಗಲಿಲ್ಲ, ಯಾವ ಕ್ಲಾಸ್ ಅಂತ. ಪಾಸಾಯ್ತು ಅಂತ ಹೇಳ್ತಿದ್ದೆ ಅಷ್ಟೇ ಎಂದು ಸಿದ್ದರಾಮಯ್ಯ ಬಾಲ್ಯವನ್ನು ಮೆಲುಕುಹಾಕಿದರು.

ಶ್ರೀನಿರಂಜನಾನಂದಪುರಿ ಸ್ವಾಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಶಿವಾನಂದಪುರಿ ಮಹಾಸ್ವಾಮಿಗಳು, ಸಿದ್ದರಾಮಾನಂದಪುರಿ ಸ್ವಾಮಿ, ಈಶ್ವರಾನಂದಪುರಿ ಸ್ವಾಮಿ, ಶಾಸಕ ಪ್ರಿಯಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೊಪ್ಪಳ ವಿವಿ ಕುಲಸಚಿವ ಡಾ.ಬಿ.ಕೆ.ರವಿ, ರಾಜ್ಯ ಕುರುಬರ ಸಂಘದ ಅಧ್ಯಕ್ಷರಾದ ಸುಬ್ರಮಣಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES