ಬೆಂಗಳೂರು : ನಟ ರಜನಿಕಾಂತ್ ಕನ್ನಡ ದ್ರೋಹಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಜನಿಕಾಂತ್ ಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಮಾತನಾಡಿದ್ದರು. ಅಂತವರ ಸಿನಿಮಾ ಬಿಡುಗಡೆ ಮಾಡಿದ್ದು ಸರಿಯಲ್ಲ. ನಟ ಶಿವರಾಜ್ ಕುಮಾರ್ ಆ ಸಿನಿಮಾದಲ್ಲಿ ನಟಿಸುವ ಮೊದಲು ಯೋಚನೆ ಮಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ.
ರಜನಿಕಾಂತ್ ಚಿತ್ರ 2,500 ಸಾವಿರ ಪರದೆಗಳ ಮೇಲೆ ಬಿಡುಗಡೆ ಆಗಿದೆ. ತಮಿಳುನಾಡು ಮತ್ತು ಆಂದ್ರಪ್ರದೇಶದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿಲ್ಲ. ಇದರಿಂದ ಕನ್ನಡ ಸಿನಿಮಾಗಳಿಗೆ ಸಮಸ್ಯೆ ಆಗಲಿದೆ. ಟಿಕೆಟ್ ದರ ನಿಯಂತ್ರಣ ಮಾಡದಿದ್ರೆ ಕಷ್ಟ ಎಂದು ವಾಗ್ದಾಳಿ ನಡೆಸಿದ್ದಾರೆ.
ವಾಣಿಜ್ಯ ಮಂಡಳಿ ಸತ್ತು ಹೋಗಿದೆ
ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಪಾರ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರಕ್ಕೆ ಸಬ್ಸಿಡಿ ಕೊಡಬೇಕು ಅಂತ ಮನವಿ ಮಾಡಿದ್ದೆ. ರಾಮಕೃಷ್ಣ ಹೆಗ್ಡೆ ಸರ್ಕಾರದಲ್ಲಿ ಒಪ್ಪಿದ್ದರು. ಕನ್ನಡ ಚಿತ್ರರಂಗದ ಗಾಂಭೀರ್ಯ ಹೋಗಿದೆ. ವಾಣಿಜ್ಯ ಮಂಡಳಿ ಸತ್ತು ಹೋಗಿದೆ. ಕನ್ನಡ ಚಿತ್ರರಂಗಕ್ಕೆ ಅಪಾಯವಾಗಿದೆ. ಸರ್ಕಾರ ಮತ್ತು ವಾಣಿಜ್ಯ ಮಂಡಳಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.