ಬೆಂಗಳೂರು : ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಂದೆ ಬಿ.ಕೆ. ಶಿವರಾಂ ಅವರ ಮಲ್ಲೇಶ್ವರದ ನಿವಾಸದತ್ತ ರವಾನಿಸಲಾಗುತ್ತಿದೆ.
ಬ್ಯಾಂಕಾಕ್‌ನಿಂದ ಕಾರ್ಗೋ ವಿಮಾನದಲ್ಲಿ ತರಲಾದ ಮೃತದೇಹವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುಮಾರು 30 ನಿಮಿಷಗಳ ಕಸ್ಟಮ್ಸ್ ಕ್ಲಿಯರೆನ್ಸ್ ಪ್ರಕ್ರಿಯೆ ಮುಗಿಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಬಳಿಕ, ಆ್ಯಂಬುಲೆನ್ಸ್ ಮೂಲಕ ಏರ್‌ಪೋರ್ಟ್‌ನಿಂದ ನಿವಾಸದತ್ತ ಸ್ಪಂದನಾ ಪಾರ್ಥಿವ ಶರೀರ ರವಾನಿಸಲಾಯಿತು. ಸ್ಪಂದನಾ ಅವರ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್, ಮಾವ ಚಿನ್ನೇಗೌಡ, ಶಾಸಕ ಮುನಿರತ್ನ ಹಾಗೂ ಸಂಬಂಧಿಕರು ಸೇರಿದಂತೆ ಹಲವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಮಧ್ಯರಾತ್ರಿಯಿಂದಲೇ ಅಂತಿಮ ದರ್ಶನ
ಬಿ.ಕೆ ಶಿವರಾಂ ಮನೆ ಬಳಿ ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯರಾತ್ರಿಯಿಂದಲೇ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸುಗಮ ಅಂತಿಮ ದರ್ಶನಕ್ಕೆ ಪೊಲೀಸರು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ.
ನಾಳೆ ಸ್ಪಂದನಾ ಅಂತ್ಯಸಂಸ್ಕಾರ
ಈಗಾಗಲೇ ಅಭಿಮಾನಿಗಳು ಹಾಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಾಳೆ ಅಂತಿಮ ಸಂಸ್ಕಾರ ಮಾಡಲು ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಕುಟುಂಬಸ್ಥರು ನಿರ್ಧರಿಸಿದ್ದಾರೆ.