ಬೆಂಗಳೂರು: ರಾಜ್ಯದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮ ತಪ್ಪಿಸಲು ಪರೀಕ್ಷಾ ಕೇಂದ್ರಗಳ ಮೇಲೆ ಡೋನ್ ಕ್ಯಾಮೆರಾ ಕಣ್ಣಿಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ.
ಇದನ್ನು ಓದಿ: 10 ಬಿಟ್ಟು 12 ಲಕ್ಷ ಕೊಟ್ರೆ ಅವರಿಗೆ ಪೋಸ್ಟಿಂಗ್ : ಪ್ರಲ್ಹಾದ್ ಜೋಶಿ
ಇತ್ತೀಚೆಗೆ ಶಿಕ್ಷಣ ಇಲಾಖೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ಬಗ್ಗೆ ತಜ್ಞರೊಂದಿಗೆ ಸಭೆ ನಡೆಸಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ತಜ್ಞರು ಡೋನ್ ಕ್ಯಾಮೆರಾ ಕಣ್ಣಾವಲು, ನೀಟ್ ಮಾದರಿಯಲ್ಲಿ ವಸ್ತ್ರ ಸಂಹಿತೆ ಜಾರಿ, ಪ್ರಶ್ನೆ ಪತ್ರಿಕೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಸೇರಿದಂತೆ ಹಲವು ಸಲಹೆ ನೀಡಿದ್ದರು. ಆದ್ದರಿಂದ ಪರೀಕ್ಷೆ ಸಮಯದಲ್ಲಿ ಡೋನ್ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ತಡೆಯಲು ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.
ತಜ್ಞರ ಸಲಹೆಗಳನ್ನು ಆಧರಿಸಿ ಬೆಂಗಳೂರು ಉತ್ತರ ಜಿಲ್ಲೆಯ ಉಪ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ನೆಲ ಮಹಡಿಗೆ ಬದಲಾಗಿ ಮೊದಲನೇ ಮಹಡಿಯಲ್ಲಿ ಪರೀಕ್ಷೆ ನಡೆಸಬೇಕು. ಪ್ರಶ್ನೆ ಪತ್ರಿಕೆಗಳ ಬಂಡಲ್ ತೆಗೆಯುವುದು, ಸೀಲ್ ಮಾಡುವುದನ್ನು ವೆಬ್ ಕಾಸ್ಟಿಂಗ್ ಮಾಡಬೇಕು. ಬಾಡಿಗೆ ಡ್ರೋನ್ ಕ್ಯಾಮೆರಾಗಳ ಮೂಲಕ ಅಕ್ರಮ ತಡೆಯಬೇಕು ಎಂದು ಸೂಚಿಸಿದ್ದಾರೆ.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಶೇ.100ರಷ್ಟು ಸಿಸಿ ಕ್ಯಾಮೆರಾ ಅಳವಡಿಕೆ ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಪರೀಕ್ಷಾ ಅಕ್ರಮ ತಡೆಯಲು ಇಲಾಖೆ ಮುಂದಾಗಿದೆ ಎನ್ನಲಾಗಿದೆ.