ಬೆಂಗಳೂರು: ರಾತ್ರಿ ಗಸ್ತು ವೇಳೆ ತಪಾಸಣೆಗೆ ಮುಂದಾದ ಪೊಲೀಸರ ಮೇಲೆ ಮಚ್ಚು ಬೀಸಿ ಹಲ್ಲೆ ನಡೆಸಿದ ಕಿಡಿಗೇಡಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಲಾಲ್‌ಬಾಗ್ ಸುತ್ತ ಮಾರ್ಗ ಬದಲಾವಣೆ!: ಮಾಹಿತಿ ಇಲ್ಲಿದೆ
ಜೆ.ಜೆ. ನಗರ ವ್ಯಾಪ್ತಿಯ ಫಾರೂಕಿ ನಗರದ ಅಫ್ರಿದ್ ಖಾನ್ ಬಂಧಿತ, ಚಾಮರಾಜಪೇಟೆ ಅನಂತರಾಮಯ್ಯ ಕಾಂಪೌಂಡ್ ಸಮೀಪ ಬುಧವಾರ ಮಧ್ಯಾಹ್ನ ಈ ಕೃತ್ಯ ನಡೆದಿದೆ. ಚಾಮರಾಜಪೇಟೆ ಠಾಣಿ ಕಾನ್‌ಸ್ಟೆಬಲ್‌ಗಳಾದ ವಿಜಯಕುಮಾರ್ ಮತ್ತು ಶಿವಪ್ರಸಾದ್ ದಾನರೆಡ್ಡಿ ಹಲ್ಲೆಗೆ ಒಳಗಾಗಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ವಿಜಯಕುಮಾರ್ ಮತ್ತು ಶಿವಪ್ರಸಾದ್ ದಾನರೆಡ್ಡಿ ಬುಧವಾರ ಚೀತಾ ಬೈಕ್ ನಲ್ಲಿ ಗಸ್ತಿನಲ್ಲಿದ್ದರು. 3 ಗಂಟೆಯಲ್ಲಿ ಚಾಮರಾಜಪೇಟೆಯ ಅನಂತರಾಮಯ್ಯ ಕಾಂಪೌಂಡ್ 2ನೇ ಕ್ರಾಸ್‌ನಲ್ಲಿ ಖಾನ್ ಶಂಕಾಸ್ಪದವಾಗಿ ಬರುತ್ತಿದ್ದುದನ್ನು ಗಮನಿಸಿದ್ದಾರೆ. ಎಸಿಸಿಟಿ ಎನ್‌ಎಸ್ ಆ್ಯಪ್‌ನಲ್ಲಿ (ಹಳೇ ಕ್ರಿಮಿನಲ್‌ಗಳ ಪತ್ತೆ ಹಚ್ಚುವ ಬೆರಳಚ್ಚು ಪರೀಕ್ಷೆ) ತಪಾಸಣೆ ಮಾಡಲು ಖಾನ್‌ಗೆ ನಿಂತು ಕೊಳ್ಳುವಂತೆ ಸೂಚಿಸಿದ್ದಾರೆ.
ಇದರಿಂದ ಕೆರಳಿದ ಆತ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಿನ್ನೆ ತಾನೆ ಜೈಲಿನಿಂದ ಬಂದಿದ್ದೇನೆ. ಆಗಲೇ ಚೆಕ್ ಮಾಡಲು ಬಂದಿದ್ದೀರಾ. ನನ್ನ ತಂಟೆಗೆ ಬರದಂತೆ ಮಾಡುತ್ತೇನೆ ಎನ್ನುತ್ತ ಬೆನ್ನ ಹಿಂದೆ ಅಡಗಿಸಿಟ್ಟಿದ್ದ ಮಚ್ಚು ತೆಗೆದು ಪೊಲೀಸರ ಮೇಲೆ ಬೀಸಿದ್ದಾನೆ. ತಪ್ಪಿಸಿಕೊಳ್ಳುವ ಭರದಲ್ಲಿ ದಾನರೆಡ್ಡಿ ಎಡಗೈನ ಹೆಬ್ಬೆರಳಿಗೆ ಗಾಯವಾಗಿದೆ.
ಎಚ್ಚೆತ್ತ ವಿಜಯಕುಮಾರ್ ಹಿಂದಿನಿಂದ ಆರೋಪಿಯನ್ನು ಹಿಡಿದುಕೊಂಡಿದ್ದಾರೆ. ಕೂಡಲೇ ಹೊಯ್ಸಳ ಸಿಬ್ಬಂದಿ ಕರೆಸಿಕೊಂಡು ಠಾಣೆಗೆ ಆರೋಪಿಯನ್ನು ಕರೆತಂದಿದ್ದಾರೆ. ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.