ಬೆಂಗಳೂರು : ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ನಿನ್ನೆ ಮಲ್ಲಿಕಾರ್ಜುನ ಖರ್ಗೆ ಕುರಿತು ನೀಡಿದ್ದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಒಬ್ಬ ವ್ಯಕ್ತಿಯನ್ನ ವರ್ಣದ ಆಧಾರದ ಮೇಲೆ ಅಪಹಾಸ್ಯ ಮಾಡುವುದು ಕ್ರಿಮಿನಲ್ ಅಫೆನ್ಸ್ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಾಯ್ತಪ್ಪಿ ಮಾತನಾಡೋಕೆ ಅವರೇನು ಚಿಕ್ಕ ಮಗುನಾ? ಇಪ್ಪತ್ತೈದು ವರ್ಷ ಅವರು ರಾಜಕಾರಣ ಮಾಡಿದ್ದಾರೆ. ಅದು ಖರ್ಗೆಗೆ ಆದರೇನು, ಖಂಡ್ರೆಗೆ ಆದರೇನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಹಂಚಿ ಗೆಲ್ಲುತ್ತಿದ್ದಾರೆ
ಯಾರನ್ನೇ ಆ ರೀತಿ ಟೀಕೆ ಮಾಡಿದರೂ ತಪ್ಪು ತಪ್ಪೇ. ಕೂಡಲೇ ಪೊಲೀಸರು ಸುಮೋಟೊ ಕೇಸ್ ದಾಖಲಿಸಬೇಕು. ನನ್ನ ಪ್ರಕಾರ ಅರ್ಹತೆ ಮೇಲೆ ಅವರು ಗೆದ್ದು ಬರುತ್ತಿಲ್ಲ. ಜಾತಿ, ಹಣದ ಮೇಲೆ ಅವರು ಗೆದ್ದು ಬರುತ್ತಿದ್ದಾರೆ. ಕೋಮು ಗಲಭೆ ಸೃಷ್ಟಿಸಿ, ಹಣ ಹಂಚಿ ಗೆಲ್ಲುತ್ತಿದ್ದಾರೆ ಎಂದು ಆರಗ ವಿರುದ್ದ ಕಿಡಿಕಾರಿದ್ದಾರೆ.
ನಾನೂ ಕೂಡ ವಲಸಿಗ
ಕಾಂಗ್ರೆಸ್ ನಲ್ಲಿ ಮೂಲ ಹಾಗೂ ವಲಸಿಗ ವಾರ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಗೆ ನಾನೂ ಕೂಡ ವಲಸಿಗ. ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬಂದಿದ್ದೇವೆ. ಮಾಜಿ ಸಿಎಂ ಬೊಮ್ಮಾಯಿ ವಲಸಿಗ. ಬಿಜೆಪಿಯಲ್ಲಿ ಶೇ.80 ದಳದಿಂದ ಹೋಗಿರೋರು. ಮೂಲ ವಲಸಿಗೆ ಅಂತಾ ನಮ್ಮಲ್ಲಿಲ್ಲ ಎಂದು ಹೇಳಿದ್ದಾರೆ.