ರಾಯಚೂರು : ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಗ್ಯಾಂಗ್ ಒಂದು ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಚಾಕೋಲೆಟ್ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಅಬಕಾರಿ ಪೊಲೀಸರು ಹೆಡೆಮುರಿ ಕಟ್ಟಿ ಜೈಲು ದಾರಿ ತೋರಿಸಿದ್ದಾರೆ. ರಾಚಯ್ಯ ಸ್ವಾಮಿ ಮತ್ತು ಅಮರಯ್ಯಸ್ವಾಮಿ ಬಂಧಿತ ಆರೋಪಿಗಳು.
ಆರೋಪಿಗಳು ರಾಯಚೂರಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಗಾಂಜಾ ಮಿಕ್ಸ್ ಮಾಡಿದ ಚಾಕೋಲೆಟ್ಗಳನ್ನು ಸಂಗ್ರಹಿಸಿ ನಿತ್ಯವೂ ಮಾರಾಟ ಮಾಡುತ್ತಿದ್ದರು. ಪ್ರತಿ ಚಾಕೋಲೆಟನ್ನು 50 ರಿಂದ 60 ರೂ.ಗೆ ಮಾರಾಟ ಮಾಡುತ್ತಿದ್ದರು. ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ರೇಟ್ ಫಿಕ್ಸ್ ಮಾಡುತ್ತಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
482 ಗಾಂಜಾ ಮಿಶ್ರಿತ ಚಾಕೋಲೆಟ್ ವಶ
ಇನ್ನು ಬಂಧಿತ ಆರೋಪಿಗಳಿಂದ 482 ಗಾಂಜಾ ಮಿಶ್ರಿತ ಚಾಕೋಲೆಟ್ಗಳನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತ ಆರೋಪಿಗಳು ರಾಯಚೂರು ನಗರದ ಹೊರ ವಲಯದ ಕೈಗಾರಿಕ ಪ್ರದೇಶ ಹಾಗೂ ಮನ್ಸಲಾಪುರ ಭಾಗದಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ಮಾಡ್ತಿದ್ರು. ಇಬ್ಬರನ್ನು ಅಬಕಾರಿ ಪೊಲೀಸರು ಮತ್ತಷ್ಟು ವಿಚಾರಣೆ ಮಾಡಿದಾಗ ಈ ಗ್ಯಾಂಗಿನ ಸಂಪೂರ್ಣ ಅಸಲಿಯತ್ತು ಬಯಲಾಗಲಿದೆ.