ಮಲಪ್ಪುರಂ (ಕೇರಳ): ನಗರ ಪಾಲಿಕೆಯ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಣಾ ಘಟಕಕ್ಕೆ ಸೇರಿದ 11 ಮಹಿಳಾ ಕಾರ್ಮಿಕರಿಗೆ ಇತ್ತೀಚೆಗೆ ಲಾಟರಿ ಕೊಳ್ಳಬೇಕು ಎನ್ನಿಸಿತು. ಆದರೆ ಯಾರ ಬಳಿಯು 250 ಹಣವಿರಲಿಲ್ಲ. ಹೀಗಾಗಿ 11 ಮಹಿಳಾ ಕಾರ್ಮಿಕರೂ ದುಡ್ಡು ಹಾಕಿ 250 ರು. ಒಟ್ಟುಗೂಡಿಸಿ ಒಂದು ಲಾಟರಿ ಟಿಕೆಟ್ ಖರೀದಿಸಿದರು. ಅದೃಷ್ಟ ಹೇಗೆ ಖುಲಾಯಿಸಿದೆ ಎಂದರೆ, ಇವರೀಗ 10 ಕೋಟಿ ಜಾಕ್‌ಪಾಟ್ ಗೆದ್ದಿದ್ದಾರೆ. ಅಂದರೆ ಪ್ರತಿ ಮಹಿಳೆ ಈ 10 ಕೋಟಿ ರು. ನಲ್ಲಿ 90 ಲಕ್ಷ ರು. ಪಾಲು ಪಡೆಯಲಿದ್ದಾರೆ.
ಇದನ್ನೂ ಓದಿ: ರೀಲ್ಸ್ ಹುಚ್ಚು: ಐ-ಫೋನ್ ಖರೀದಿಗೆ 8 ತಿಂಗಳ ಮಗುವನ್ನು ಮಾರಿದ ತಂದೆತಾಯಿ!
ಮಲಪ್ಪುರಂ ಜಿಲ್ಲೆಯಲ್ಲಿ ಪರಪ್ಪನಂಗಡಿ ಮಹಾನಗರ ಪಾಲಿಕೆ ಇದ್ದು, ಅಲ್ಲಿ ‘ಹರಿತಾ ಕರ್ಮಸೇನಾ’ ಹೆಸರಿನ ತ್ಯಾಜ್ಯ ನಿರ್ವಹಣಾ ಮಹಿಳಾ ತಂಡವಿದೆ. ಇಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾಸಿಕ 7,500 ನಿಂದ 14,000 ರು.ವರೆಗೆ ಸಂಬಳವಿದೆ. ಆದರೆ ಸಂಬಳವು ದೈನಂದಿನ ಜೀವನ ನಡೆಸಲು ಸಾಕಾಗುವುದಿಲ್ಲ. ಹೀಗಾಗಿ ಅವರು ಆಗಾಗ ಲಾಟರಿಯಲ್ಲಿ ಅದೃಷ್ಟ ಹುಡುಕುತ್ತಾರೆ.
ಕಳೆದ ವರ್ಷವೂ ಓಣಂ ವೇಳೆ ಇದೇ ರೀತಿ ಹಣ ಸಂಗ್ರಹಿಸಿ ಲಾಟರಿ ಖರೀದಿಸಿದ್ದ ಈ ಮಹಿಳೆ ಯರು 7500 ರು. ಗೆದ್ದಿದ್ದರು. ಆಗ ಗೆದ್ದ ಹಣವನ್ನು ಸಮಾನವಾಗಿ ಹಂಚಿಕೊಂಡಿದ್ದರು. ಈ ಬಾರಿ ‘ಮಾನ್ಸೂನ್ ಬಂಪರ್’ ಲಾಟರಿ ಖರೀದಿಸೋಣ ಎಂದು ಹೊರಟಾಗ ಯಾರಲ್ಲೂ 250 ರು. ಇರಲಿಲ್ಲ. ಹೀಗಾಗಿ 11 ಮಹಿಳೆಯರೂ ಸೇರಿ ಒಟ್ಟು 250 ರು. ಸಂಗ್ರಹಿಸಿದರು. ಅ೦ದರೆ ಒಬ್ಬೊಬ್ಬ ಮಹಿಳೆ ಸುಮಾರು 23 ರು. ಕಟ್ಟಿದಳು. ವಿಚಿತ್ರ ಎಂದರೆ ಒಬ್ಬಳ ಬಳಿ 23 ರು. ಕೂಡ ಇರಲಿಲ್ಲ. ಸ್ನೇಹಿತರ ಬಳಿ ಸಾಲ ಮಾಡಿ 23 ರು. ಕಟ್ಟಿದಳು. ಈಗ ಬಂದ ಹಣವನ್ನು ಸಮಾನವಾಗಿ ಹಂಚಿಕೊಳ್ಳಲು ತೀರ್ಮಾನಿಸಿದ್ದಾರೆ.
ವಿಜೇತ ರಲ್ಲಿ ಒಬ್ಬರಾದ ರಾಧಾ ಮಾತನಾಡಿ, ‘ಜಾಕ್ ಪಾಟ್ ವಿಷಯ ತಿಳಿಯುತ್ತಿದ್ದಂತೆ ನಮ್ಮ ಸಂಭ್ರಮ, ಸಂತಸಕ್ಕೆ ಮಿತಿಯೇ ಇರಲಿಲ್ಲ. ನಾವೆಲ್ಲ ಕಷ್ಟದಲ್ಲಿದ್ದೆವು. ಈಗ ಹಣ ಬಂದರೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಲಿದೆ’ ಎಂದರು.
ಹರಿತ ಕರ್ಮ ಸೇನೆ ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, ‘ಬಹುಮಾನ ವಿಜೇತರಲ್ಲಿ ಅನೇಕ ರಿಗೆಸಾಲಗಳಿವೆ. ಮದುವೆಯಾಗುವ ಹೆಣ್ಣುಮಕ್ಕ ಳಿದ್ದಾರೆ ಅವರಿಗೆಲ್ಲ ಈಗ ಶುಭ ಗಳಿಗೆ ಬಂದಿದೆ ಎಂದರು. ವಿಜೇತರನ್ನು ಅಭಿನಂದಿಸಲು ಗುರು ವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.