ಬೆಂಗಳೂರು : ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ನ ಕೆಲವು ಶಾಸಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಂಡಾಮಂಡಲವಾಗಿರುವ ಬಗ್ಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಕಾಂಗ್ರೆಸ್ ಪಕ್ಷದ ಶಾಸಕರ ಸ್ಥಿತಿಯೇ ಹೀಗಾದರೆ, ನಾಳೆ ಸರ್ಕಾರವನ್ನು ಪ್ರಶ್ನಿಸುವ ಜನಸಾಮಾನ್ಯರ ಪಾಡು ಏನಾಗಲಿದೆ ಎಂದು ಬಿಜೆಪಿ ಪ್ರಶ್ನಿಸಿದೆ. ಅಲ್ಲದೆ, ಇದೇನು ಪ್ರಜಾಪ್ರಭುತ್ವವೋ ಅಥವಾ ಸಿದ್ದರಾಮಯ್ಯನವರ ತುಘಲಕ್ ದರ್ಬಾರೋ ಎಂದು ಕಿಡಿಕಾರಿದೆ.
ಸಿಎಂ ಸಿದ್ದರಾಮಯ್ಯರವರ ಎರಡು ತಿಂಗಳ ಅಸಮರ್ಥ ಹಾಗೂ ಅವೈಜ್ಞಾನಿಕ ಆಡಳಿತದ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಿದ್ದ ಸ್ವಪಕ್ಷೀಯ ಶಾಸಕರ ವಿರುದ್ಧವೇ ಈಗ ಅವರು ಕೆಂಡಕಾರುತ್ತಿದ್ದಾರೆ. ಸಿದ್ದರಾಮಯ್ಯ ಅವರೇ, ವರ್ಗಾವಣೆ ದಂಧೆ, ಅನುದಾನ ಕಡಿತ, ಸಚಿವರ ಹಾಗೂ ಅವರ ಆಪ್ತ ಕಾರ್ಯದರ್ಶಿಗಳ ಹಸ್ತಕ್ಷೇಪದಿಂದ ರೋಸಿ ಹೋಗಿರುವ ನಿಮ್ಮದೇ ಪಕ್ಷದ ಶಾಸಕರು, ನಿಮ್ಮ ಸಹಾಯ ಕೇಳಿ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ಅದನ್ನು ಹರಿದು ಕಸದ ಬುಟ್ಟಿಗೆ ಹಾಕುವಷ್ಟು ಉದ್ಧಟತನ ತೋರಿಸಿದ್ದೀರಿ ಎಂದು ಛೇಡಿಸಿದೆ.