ಬೆಂಗಳೂರು : ನಿಮ್ಮ ದ್ರೋಹಕ್ಕೆ ಬಿಜೆಪಿ ಸರ್ಕಾರವನ್ನು ರಾಜ್ಯದ ಜನರು ಮನೆಗೆ ಕಳಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ಹೊರಹಾಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಬಂಧಿತರ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿರುವುದಕ್ಕೆ ಕಿಡಿ ಕಾರಿದರು.
ತನ್ವೀರ್ ಸೇಠ್ ತಂದೆ ಒಬ್ಬ ಒಳ್ಳೆಯ ರಾಜಕಾರಣಿ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ವಿಚಾರದಲ್ಲಿ ಪೊಲೀಸರ ಮೇಲೆ ದಾಳಿ, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿರೋದು. ಪುಲಕೇಶಿನಗರದಲ್ಲಿ ನಮ್ಮ ಸಂಘಟನೆಯ ಅಧ್ಯಕ್ಷ ಮುನೇಗೌಡರ ಮನೆ ಮೇಲೆ ದಾಳಿ ಬೈಕ್ ಸುಟ್ಟಿರುವುದು. ಇದನ್ನೆಲ್ಲ ನೆನಪು ಮಾಡಿಕೊಳ್ಳದೆ ಅವರೆಲ್ಲ ಅಮಾಯಕರು, ಅವರ ಕೇಸ್ ವಾಪಸ್ ಪಡೆಯಿರಿ ಅಂತೀರಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಮೇಲೆ ಸಾಕಷ್ಟು ಕೇಸ್ ಇದೆ
ಕನ್ನಡಪರ ಹೋರಾಟಗಾರರು, ರೈತ ಸಮಸ್ಯೆಗಳ ಬಗ್ಗೆ ನಾಡು ನುಡಿ ಬಗ್ಗೆ ಜಲ ಭಾಷೆಗಾಗಿ ನಾವು ಹೋರಾಟ ಮಾಡಿದ್ದೇವೆ. ನಮ್ಮ ಮೇಲೆ ಸಾಕಷ್ಟು ಕೇಸ್ ಹಾಕಲಾಗಿದೆ. ಆಗ ನೀವು ಒಂದು ಮಾತನಾಡಿಲ್ಲ. ನಮ್ಮ ಮೇಲೆ ಸಾಕಷ್ಟು ಕೇಸ್ ಇದೆ. ನಮ್ಮನ್ನು ಸುತ್ತುಸ್ತಾ ಇದ್ದೀರಲ್ಲ ಹದಿನೈದು ವರ್ಷದಿಂದ ಎಂದು ಬೇಸರ ಹೊರಹಾಕಿದರು.
ಇದನ್ನೂ ಓದಿ : ಸಿಎಂಗೂ ಇಂಥ ಕೇಸ್ಗಳ ವಾಪಸಾತಿಗೆ ಪತ್ರ ಬರೆದಿದ್ದಾರೆ : ಬಸವರಾಜ ಬೊಮ್ಮಾಯಿ
ನೀವು ಇದೇ ಹಾದಿ ತುಳಿಯುತ್ತಿದ್ದೀರಾ?
ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಲು ಸಾಕಷ್ಟು ಮನವಿ ಮಾಡಿದ್ದೇವೆ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿಗೆ ಮೂರು ಬಾರಿ ಮನವಿ ಮಾಡಿದ್ದೇವೆ. ಕನ್ನಡಪರ ಹೋರಾಟಗಾರರ ಮೇಲಿನ ಕೇಸ್ ಹಿಂದೆ ತಗೆಯುತ್ತಿಲ್ಲ. ನಿಮ್ಮ ದ್ರೋಹಕ್ಕೆ ಬಿಜೆಪಿ ಸರ್ಕಾರವನ್ನು ಜನರು ಮನೆಗೆ ಕಳಿಸಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರವಿದೆ. ನೀವು ಕೂಡ ಈಗ ಇದೇ ಹಾದಿ ತುಳಿಯುತ್ತಿದ್ದೀರಾ? ಎಂದು ಹೇಳಿದರು.
ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ
ಪೊಲೀಸ್ ಠಾಣೆಗೆ ಬೆಂಕಿ ಇಟ್ಟರಲ್ಲ, ಬೈಕ್ ಸುಟ್ಟರಲ್ಲ, ಮನೆ ಸುಟ್ಟರಲ್ಲ. ಪೊಲೀಸರು ಕನ್ನಡಿಗರಲ್ವಾ? ಆಗ ಎಲ್ಲೋಗಿದ್ರಿ ಸ್ವಾಮೀ ನೀವು. ಮೊದಲು ನೀವು ಕನ್ನಡಪರ ಹೋರಾಟಗಾರರು ಹಾಗೂ ರೈತರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ನಾವು ಗೃಹ ಸಚಿವ ಪರಮೇಶ್ವರಗೆ ಮನವಿ ಮಾಡ್ತೀವಿ. ಈ ಕೂಡಲೇ ಕನ್ನಡಪರ ಹೋರಾಟಗಾರರು ಹಾಗೂ ರೈತರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಕೇಸ್ ವಾಪಸ್ ಪಡೆಯದೇ ಇದ್ರೆ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.