ಬೆಂಗಳೂರು : ಸಚಿವರ ವಿರುದ್ಧ ಸ್ವಪಕ್ಷದ ಶಾಸಕರೇ ಸಿಎಂಗೆ ಪತ್ರ ಬರೆದಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾವ್ ಪತ್ರ, ಏನ್ ಲೆಟರ್ ಎಲ್ಲಾ ಬೋಗಸ್. ಪತ್ರಕ್ಕೆ ಬೇರೆ ಬೇರೆಯವರು ಸಿಗ್ನೇಚರ್ (ಸಹಿ) ಹಾಕಿದ್ದಾರೆ ಎಂದು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಐದು ಉಚಿತ ಗ್ಯಾರಂಟಿಗಳಿಗೆ 40 ಸಾವಿರ ಕೋಟಿ ಹೊಂದಿಸಬೇಕು. ಜಲಸಂಪನ್ಮೂಲ, ಪಿಡಬ್ಲ್ಯೂಡಿಯಿಂದ ಕೊಡೋಕೆ ಆಗ್ತಿಲ್ಲ. ಶಾಸಕಾಂಗ ಸಭೆ ಕರೆದಿದ್ದೇವೆ, ಎಲ್ಲಾ ಮಾತನಾಡುತ್ತೇವೆ. ಸಚಿವರು ತಾಳ್ಮೆಯಿಂದ ಇರಬೇಕು ಅಂತ ಹೇಳಿದ್ದೇವೆ. ಮುಖ್ಯಮಂತ್ರಿಗಳು ಸಹ ತಾಳ್ಮೆಯಿಂದಿರಲು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಡಿ.ಕೆ ಶಿವಕುಮಾರ್ ಕೂಡ ಕಲ್ಲು ಬಂಡೆ ಇದ್ದಂಗೆ : ಶಿವಲಿಂಗೇಗೌಡ
ಬಿಜೆಪಿ ಬೊಕ್ಕಸ ದಿವಾಳಿ ಮಾಡಿದೆ
ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಬೊಕ್ಕಸ ದಿವಾಳಿ ಮಾಡಿದೆ. ನಾವು ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಎಲ್ಲರೂ ತಾಳ್ಮೆಯಿಂದ ಇರಲೇಬೇಕು. ಬೇರೆ ಎಮರ್ಜೆನ್ಸಿ(ತುರ್ತು ಪರಿಸ್ಥಿತಿ) ಇದ್ದರೆ ಅದನ್ನು ಮಾಡಿಕೊಡುತ್ತೇವೆ. ನಮಗೆ ಬೇರೆ ಬೇರೆ ಕೆಲಸಗಳಿವೆ. ರಾಜ್ಯದಲ್ಲಿ ಮಳೆ ಜಾಸ್ತಿ ಆಗುತ್ತಿದೆ. ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಓಗಳ ಜೊತೆ ಸಭೆ ಇದೆ. ಏನೆಲ್ಲಾ ಮಾಡಬೇಕು ಅಂತ ನಿರ್ದೇಶನ ಕೊಡುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಮೇಲೆ ಎಷ್ಟೋ ಕೇಸ್ ಹಾಕಿದ್ದಾರೆ
ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆ ಪ್ರಕರಣದ ಮರು ತನಿಖೆ ವಿಚಾರವಾಗಿ ಶಾಸಕ ತನ್ವೀರ್ ಸೇಠ್ ನೀಡಿರುವ ಹೇಳಿಕೆಯನ್ನು ಡಿಕೆಶಿ ಬೆಂಬಲಿಸಿದ್ದಾರೆ. ಹೌದು, ಎಷ್ಟೋ ಕಡೆ ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ. ಬೆಂಗಳೂರು, ಹುಬ್ಬಳ್ಳಿಯಲ್ಲಿ ಎಲ್ಲಾ ಕಡೆ ಕೇಸ್ ಹಾಕಿದ್ರು. ನಮ್ಮ ಮೇಲೆ ಎಷ್ಟೋ ಕೇಸ್ ಹಾಕಿದ್ದಾರೆ. ರಾಜಕೀಯವಾಗಿ ವಿರೋಧ ಮಾಡಿದೋರ ಮೇಲೆಲ್ಲಾ ಕೇಸ್ ಹಾಕಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.