ಬಳ್ಳಾರಿ : ರೈತರ ಬೆಂಬಲಕ್ಕಾಗಿ ಅನಿವಾರ್ಯವಾಗಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದು ಕೆಎಂಎಫ್ (ಕರ್ನಾಟಕ ಹಾಲು ಒಕ್ಕೂಟ) ಅಧ್ಯಕ್ಷ ಭೀಮಾನಾಯ್ಕ್ ಹೇಳಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಗಸ್ಟ್ ಒಂದರಿಂದ ನಂದಿನ ಹಾಲಿನ ದರ 3 ರೂಪಾಯಿ ಹೆಚ್ಚಳ ಮಾಡಲಾಗುವುದು ಎಂದರು.
ಸಹಕಾರಿ ಸಚಿವ ಕೆ.ಎನ್ ರಾಜಣ್ಣ ನೇತೃತ್ವದಲ್ಲಿ ಹಾಲಿನ ದರ ಹೆಚ್ಚಳಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಲಿನ ದರ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ. ಹಾಲು ಉತ್ಪಾದನೆಗೆ ಸಹಕಾರ ನಿಡುವ ನಿಟ್ಟಿನಲ್ಲಿ ಸಭೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ‘ಪವರ್’ ಬಲೆಗೆ ಬಿದ್ದ ಲಂಚಬಾಕ ಶಾಸಕ ‘ಭೀಮಾ ನಾಯ್ಕ್’
ಹಸು ಮಾರಾಟ ಮಾಡುವ ಸ್ಥಿತಿ
3 ರೂಪಾಯಿ ಹಾಲಿನ ದರ ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ. ಹೆಚ್ಚುವರಿಯಾಗಿ ಪಡೆದ ಹಣ ನೇರವಾಗಿ ರೈತರಿಗೆ ನೀಡಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹಾಲಿನ ದರ ವರ್ಕೌಟ್ ಆಗ್ತಿಲ್ಲ ಅಂತ ಹಾಲು ಉತ್ಪಾದನೆ ಕಡಿಮೆ ಮಾಡಲಾಗ್ತಿದೆ. ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ, ಹಸು ಮಾರಾಟ ಮಾಡುವ ಸ್ಥಿತಿ ಬಂದಿದೆ ಎಂದು ಭೀಮಾನಾಯ್ಕ್ ಬೇಸರಿಸಿದರು.
ಹೈನುಗಾರಿಕೆ ಮಾಡೋರ ಸಂಖ್ಯೆ ಕಡಿಮೆ
ಹಾಲು ಉತ್ಪಾದಕರಿಗೆ ನೀಡುವ ಹಣ ಕಡಿಮೆಯಾಗುತ್ತಿದೆ. ಹೀಗಾಗಿ, ಹೈನುಗಾರಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ, ನಮ್ಮ ರಾಜ್ಯದಲ್ಲಿ ಕಡಿಮೆ ಹಣ ನೀಡಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಉತ್ಪಾದನೆಯಾಗುತ್ತಿಲ್ಲ. ರೈತರ ಬೆಂಬಲಕ್ಕಾಗಿ ಬೆಲೆ ಹೆಚ್ಚಳ ಅನಿವಾರ್ಯ. ಆಗಸ್ಟ್ 1ರಿಂದ 3 ರೂಪಾಯಿ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.