ಕಲಬುರಗಿ : ಸರ್ಕಾರ ಅಸ್ಥಿರಗೊಳಿಸುವ ತಂತ್ರ ನಡೆಯುತ್ತಿದೆ ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿಕೆಶಿ ಅನೇಕ ಮಟ್ಟದ ಮಾಹಿತಿ ಕಲೆ ಹಾಕುತ್ತಾರೆ. ಡಿಕೆಶಿ ಅವರು ಹೇಳಿರೋದು ನಿಜ ಇದೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಯಾರು ನಂಬೋದಿಲ್ಲ. ನಾವು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡಿದ್ದೇವೆ. 2024ರ ಚುನಾವಣೆಯಲ್ಲಿ ನಾವು ನರೇಂದ್ರ ಮೋದಿ ಅವರನ್ನು ಸೋಲಿಸಲು ಪಣ ತೊಟ್ಟಿದ್ದೇವೆ. ಇವತ್ತಿನ ಸಂದರ್ಭದಲ್ಲಿ ಈ ಸರ್ಕಾರ ಅಸ್ಥಿರಗೊಳಿಸುವ ಶಕ್ತಿ ಯಾರಿಗೂ ಇಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದರು.
ಇದನ್ನೂ ಓದಿ : ನೇಕಾರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಸಿಎಂಗೆ ಪತ್ರ ಬರೆದಿದ್ದು ನಿಜ
ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಾಪೋಹ. ಸುಮ್ಮನೆ ಸುದ್ದಿ ಹರಿದಾಡುತ್ತಿದೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿಗಳಿಗೆ ಹೇಳಿದ್ದೇವೆ. ಆದರೆ, ಕಾರಣಾಂತರಗಳಿಂದ ಸಭೆ ರದ್ದಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಸಿಎಂ ಅವರಿಗೆ ಪತ್ರ ಬರೆದು ವಿನಂತಿ ಮಾಡಿಕೊಂಡಿದ್ದೇವೆ ಎಂದರು.
ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ನಿಜ. ಮತ್ತೆ ಬೇರೆಯವರು ಸಹಿ ಮಾಡಿರಬಹುದು, ಶಾಸಕಾಂಗ ಸಭೆ ಕರೆಯುವಂತೆ ಕೇಳೊದು ನಮ್ಮ ಹಕ್ಕು. ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ನಾವು ಯಾವುದೇ ಪತ್ರ ಬರೆದಿಲ್ಲ ಎಂದು ಬಿ.ಆರ್ ಪಾಟೀಲ್ ಸ್ಪಷ್ಟನೆ ನೀಡಿದರು.