ಹಾಸನ : ಭಾರಿ ಮಳೆಗೆ ರಾಜ್ಯ ಹೆದ್ದಾರಿ 85ರ ಮೇಲೆ ಗುಡ್ಡ ಕುಸಿದಿದ್ದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಿಸಿಲೆ ಮಾರ್ಗದ ಮೂಲಕ ತೆರಳುವ ಸುಬ್ರಹ್ಮಣ್ಯ ರಸ್ತೆ ಸಂಪೂರ್ಣ ಬಂದ್ ಆಗಿದೆ.
ಅಡ್ಲುಗದ್ದೆ ಬಳಿ ಎತ್ತರದಿಂದ ಮಣ್ಣು ಕುಸಿದು ರಸ್ತೆಗೆ ಬಿದ್ದಿದ್ದು ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರ ಪರದಾಡುವಂತಾಗಿದೆ. ಇದೇ ಮಾರ್ಗದಲ್ಲಿ ಬೆಳಿಗ್ಗೆ ಮರ ಬಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ನಂತರ ಮರ ತೆರವುಗೊಳಿಸಿ ವಾಹನಗಳ ಒಡಾಟಕ್ಕೆ ಅನುವು ಮಾಡಿಕೊಡಲಾಯಿತು.
ಇದೀಗ ಗುಡ್ಡ ಕುಸಿದಿದ್ದು ರಸ್ತೆ ಸಂಪರ್ಕ ಮತ್ತೆ ಸ್ಥಗಿತಗೊಂಡಿದೆ. ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ತೆರವು ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ವಾಹನ ಸವಾರರು ನಿಂತಲ್ಲೇ ಕಾಲ ಕಳೆಯಬೇಕಾಗಿದೆ.
ಶಾಲೆಗಳಿಗೆ ರಜೆ ಘೋಷಣೆ
ಹಾಸನ ಜಿಲ್ಲೆಯಾದ್ಯಂತ ಮುಂದುವರಿದ ಭಾರಿ ಮಳೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ 5 ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿ ಹಾಸನ ಡಿಸಿ ಸಿ. ಸತ್ಯಭಾಮ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಹಾಸನ ತಾಲ್ಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗ ಸೇರಿ ವಿವಿದೆಡೆ ಮಳೆ ಅಬ್ಬರ ಜೋರಾಗಿದೆ. ನಾಳೆ ವರೆಗೂ ಹೆಚ್ಚಿನ ಪ್ರಮಾಣದ ಮಳೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ.