ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 545 ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣವನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ, ನಿವೃತ್ತಿ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.
ಪೊಲೀಸ್ ಇಲಾಖೆ ಹಾಗೂ ಸಿಐಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಕ್ರಮ ನಡೆಸಿದ 52 ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಯಾವುದೇ ಇಲಾಖಾ ಪರೀಕ್ಷೆ ಬರೆಯುವಂತಿಲ್ಲ. ಇವರಿಗೆ ಶಾಶ್ವತ ನಿಷೇಧ ಹೇರಲಾಗಿದೆ.
ಜೈಲು ಹಕ್ಕಿಯಾದ ಅಮೃತ್ ಪಾಲ್
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಗರಣದಲ್ಲಿ ಬಂಧಿತರಾಗಿರುವ ಅಮೃತ್ ಪಾಲ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಮೊದಲು ವಂಚನೆ, ದಾಖಲೆ ತಿದ್ದಿದ ಹಾಗೂ ಅಧಿಕಾರ ದುರ್ಬಳಕೆ ಹೀಗೆ ವಿವಿಧ ಆರೋಪಗಳಡಿ ತನಿಖೆ ನಡೆಸಿ ಎಡಿಜಿಪಿ ವಿರುದ್ಧ ನ್ಯಾಯಾಲಯಕ್ಕೆ ಸಿಐಡಿ ಆರೋಪ ಪಟ್ಟಿ ಸಲ್ಲಿಸಿದೆ.
ನಾವು ನುಡಿದಂತೆ ನಡೆದಿದ್ದೇವೆ
ಪಿಎಸ್‌ಐ ನೇಮಕಾತಿ ಹಗರಣದ ಗಂಭೀರ ಸ್ವರೂಪ ಮತ್ತು ಸಾರ್ವಜನಿಕ ಮಹತ್ವದ ಹಿನ್ನೆಲೆಯ ಕಾರಣಕ್ಕಾಗಿ ಮುಂದಿನ ತನಿಖೆಯನ್ನು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರ ನೇತೃತ್ವದ ಆಯೋಗದ ಮೂಲಕ ನ್ಯಾಯಾಂಗ ತನಿಖೆ ನಡೆಸಲು ತೀರ್ಮಾನಿಸಿದ್ದೇವೆ. ಈ ಮೂಲಕ ನಾವು ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.