ಬೆಂಗಳೂರು : ಪ್ರಧಾನಿ ಮೋದಿಗೆ ಪಾಪ್ಯುಲಾರಿಟಿ ಇಲ್ಲ ಅಂತ ನಾನು ಹೇಳಲ್ಲ. ಆದ್ರೆ, ದಿನೇ ದಿನೆ ಅವ್ರ ವರ್ಚಸ್ಸು ಕಡಿಮೆ ಆಗ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ಶೈಲಿಯಲ್ಲಿ ಕಿಚಾಯಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲೆ ಉತ್ತರ ನೀಡದ ಅವರು, ಯಾವ ಪ್ರಧಾನಿಯೂ ಅಷ್ಟೊಂದು ಪ್ರಚಾರ ಮಾಡಿರಲಿಲ್ಲ. ಸುಮಾರು 28 ಬಾರಿ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ ಎಂದು ಚಾಟಿ ಬೀಸಿದರು.
ಬಿಜೆಪಿಯ ಅವನತಿ ಕರ್ನಾಟಕದಿಂದಲೇ, ಕಾಂಗ್ರೆಸ್ ನಿಂದಲೇ ಪ್ರಾರಂಭವಾಗಿದೆ. ಅವ್ರು ನರೇಂದ್ರ ಮೋದಿ ಮೇಲೆ ಡಿಫೆಂಡ್ ಆಗಿದ್ದಾರೆ. ಪ್ರಧಾನಿ ಮೋದಿ ಗೆಲ್ಲಿಸ್ತಾರೆ ಅಂದುಕೊಂಡಿದ್ದಾರೆ. ಅವ್ರಿಗೆ ಕರ್ತವ್ಯಕ್ಕಿಂತ ರಾಜಕೀಯವೇ ಮುಖ್ಯ ಎಂದು ಛೇಡಿಸಿದರು.
ಇದನ್ನೂ ಓದಿ : ನನ್ನ ದೇಹದ ಪ್ರತಿ ಕಣವೂ ದೇಶಕ್ಕೆ ಸಮರ್ಪಿತವಾಗಿದೆ : ಪ್ರಧಾನಿ ಮೋದಿ
ಬಿಜೆಪಿಯವ್ರು ಕೋಮುವಾದಿಗಳು
ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡ್ತೀವಿ ಅಂತ ಹೇಳಿದ್ದಾರೆ. ನಾವು ಬಿಜೆಪಿ ಮುಕ್ತ ಭಾರತ ಅಥವಾ ಬಿಜೆಪಿ ಮುಕ್ತ ಕರ್ನಾಟಕ ಮಾಡ್ತೀವಿ ಅಂತ ಹೇಳಲ್ಲ. ಅವ್ರು ಕೋಮುವಾದಿಗಳು, ವಿಛಿದ್ರಕಾರಿ ಶಕ್ತಿಗಳಾಗಿರೋದ್ರಿಂದ ಅವರು ಯಾವ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು. ಅವ್ರು ಯಾವಾಗ್ಲೂ ವಿರೋಧ ಪಕ್ಷದಲ್ಲೇ ಇರಬೇಕು ಅನ್ನೋದು ನಮ್ಮ ಆಶಯ ಎಂದು ಕುಟುಕಿದರು.
ಹೊಟ್ಟೆ ಉರಿ ಶುರುವಾಗಿಬಿಟ್ಟಿದೆ
ಅವ್ರು ಏನೇ ರಾಜಕೀಯ ಮಾಡಿದ್ರೂ ನಾವು ಹೆದರಲ್ಲ. ಜನರು ಕೊಟ್ಟ ಮ್ಯಾನ್ ಡೇಟ್ ಗೆ ಗೌರವ ಇಲ್ಲ ಅವ್ರಿಗೆ. ಬಿಜೆಪಿಯವರಿಗೆ ಹೊಟ್ಟೆ ಉರಿ ಶುರುವಾಗಿಬಿಟ್ಟಿದೆ. ನಾವು ಐದು ಉಚಿತ ಗ್ಯಾರಂಟಿ ಮಾಡ್ತಿದ್ವಿ ಅಲ್ವಾ? ಅದಕ್ಕೆ ಹೊಟ್ಟೆ ಉರಿ ಅವರಿಗೆ ಎಂದು ಸಿದ್ದರಾಮಯ್ಯ ಗುಡುಗಿದರು.