ಬೆಂಗಳೂರು : ಬಿಜೆಪಿಯ 10 ಶಾಸಕರನ್ನು ಅಧಿವೇಶನ ಮುಗಿಯುವ ವರೆಗೂ ಅಮಾನತು ಮಾಡಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಕುಟುಕಿದೆ.
ರಾಜ್ಯದಲ್ಲಿ ಸರ್ವಾಧಿಕಾರಿ ಸಿದ್ದರಾಮಯ್ಯ ಅವರ ಸರ್ಕಾರದ ತುಘಲಕ್ ದರ್ಬಾರ್ ಮಿತಿ ಮೀರಿದೆ. ಇವರು ಮಾಡುವ ಅನಾಚರಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನಮ್ಮ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ವಾಗ್ದಾಳಿ ನಡೆಸದಿದೆ.
ಇದನ್ನೂ ಓದಿ : ಡಿಸಿಎಂ ಸ್ವಕ್ಷೇತ್ರದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ
ನೀವು ನಮ್ಮ ಶಾಸಕರನ್ನು ಅಮಾನತು ಮಾಡಬಹುದು, ಹತ್ತಿಕ್ಕಲು ಸಾಧ್ಯವಿಲ್ಲ. ನಿಮ್ಮ ಈ ರಣಹೇಡಿ ದಬ್ಬಾಳಿಕೆಗೆ ನಾವು ಕುಗ್ಗುವುದಿಲ್ಲ. ನಿಮ್ಮ ಜನ ವಿರೋಧಿ, ನಾಡ ವಿರೋಧಿ ನಿಲುವುಗಳ ವಿರುದ್ಧ ನಮ್ಮ ಹೋರಾಟ ಶತ ಸಿದ್ಧ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.
10 ಶಾಸಕರು ಅಮಾನತು
ಉಪಸಭಾಧ್ಯಕ್ಷರ ಮೇಲೆ ಪೇಪರ್ ಹರಿದ ಹಿನ್ನೆಲೆ ಬಿಜೆಪಿಯ 10 ಶಾಸಕರಿಗೆ ಸಸ್ಪೆಂಡ್ ಶಿಕ್ಷೆ ವಿಧಿಸಲಾಗಿದೆ. ಆರ್. ಅಶೋಕ್, ಡಾ.ಸಿ.ಎನ್ ಅಶ್ವತ್ಥನಾರಾಯಣ್, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್, ಅರವಿಂದ್ ಬೆಲ್ಲದ್, ಭರತ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಉಮಾನಾಥ್ ಕೊಟ್ಯಾನ್ ಹಾಗೂ ಧೀರಜ್ ಮುನಿರಾಜು ಅಧಿವೇಶನ ಮುಗಿಯುವವರೆಗೂ ಅಮಾನತುಗೊಂಡಿದ್ದಾರೆ.