ಬೆಂಗಳೂರು : ನಾನು ವಿಧಾನಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಟವೆಲ್ ಹಾಕಿದ್ದೇನೆ ಅಂತ ಮಾಧ್ಯಮಗಳಲ್ಲಿ ಬರ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿಪಕ್ಷ ನಾಯಕ ಆಗ್ತಾರಂತೆ. ಕೇಂದ್ರದ ಮಂತ್ರಿಗೆ ಟವೆಲ್ ಹಾಕಿದ್ದಾರಂತೆ. ಹೀಗೆಲ್ಲಾ ಮಾಧ್ಯಮದಲ್ಲಿ ಬರ್ತಿದೆ ಎಂದರು.
ನಮ್ಮ ಪಕ್ಷದಲ್ಲಿ 19 ಶಾಸಕರಿದ್ದಾರೆ. ಅವರ ಜೊತೆಯಲ್ಲೇ ನಾನು ಹೋರಾಟ ಮಾಡ್ತೀನಿ. ವಿಧಾನಸಭಾ ಚುನಾವಣೆಯಲ್ಲಿ ನನಗೆ ಇಷ್ಟು ಪ್ರಚಾರ ಸಿಗಲಿಲ್ಲ. ಎರಡು ರಾಷ್ಟ್ರೀಯ ಪಕ್ಷಕ್ಕಿಂತ ಹೆಚ್ಚಿನ ಪ್ರಚಾರ ಮಾಧ್ಯಮಗಳು ನೀಡ್ತಿದೆ ಎಂದು ಕುಟುಕಿದರು.
ಇದನ್ನೂ ಓದಿ : ಬಿಜೆಪಿ ಪಕ್ಷದ ಜೊತೆ ಧೃಡವಾಗಿದ್ದೇನೆ: ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್
ನಾನು ಸಲಹೆ ಕೊಡೋಕೆ ದೊಡ್ಡವನಲ್ಲ
ಲೋಕಸಭಾ ಚುನಾವಣೆ ವಿಚಾರ ಕುರಿತು ಮಾತನಾಡಿ, ನಾವು ಕಳೆದ ಎರಡ್ಮೂರು ಬಾರಿಯಿಂದ ಎರಡು, ಮೂರು ಸ್ಥಾನ ಗೆಲ್ಲುತ್ತಾ ಬಂದಿದ್ದೇವೆ. ನಮ್ಮ ಶಕ್ತಿ ಅಷ್ಟೇ. ನಾವು ಸ್ವತಂತ್ರವಾಗಿ ಹೋಗಬೇಕಾ, ಹೇಗೆ ಅನ್ನೋದು ಸಂದರ್ಭ ಬಂದಾಗ ಹೇಳ್ತೀನಿ. ನಾನು ಸಲಹೆ ಕೊಡೋಕೆ ದೊಡ್ಡವನಲ್ಲ ಎಂದು ಕಾದುನೋಡುವ ತಂತ್ರದ ಮೊರೆ ಹೋದರು.
ಬಿಜೆಪಿಯಲ್ಲಿ ದೊಡ್ಡ ನಾಯಕರಿದ್ದಾರೆ
ಬಿಜೆಪಿ 65 ಸ್ಥಾನ ಗೆದ್ದರೂ ಅವರಲ್ಲಿ ದೊಡ್ಡ ನಾಯಕರಿದ್ದಾರೆ. ಬಿಜೆಪಿ ನಾಯಕರಿಗೆ ನಾನು ಮನವಿ ಮಾಡ್ತೀನಿ. ಮೊದಲು ನಿಮ್ಮ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರಿದ್ದಾರೆ. ಅವರೆಲ್ಲ ವಿಪಕ್ಷ ಸ್ಥಾನಕ್ಕೆ ಸಮರ್ಥರಿದ್ದಾರೆ. ಮೊದಲು ಒಬ್ಬರನ್ನು ಆಯ್ಕೆ ಮಾಡಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.