ಬೆಂಗಳೂರು : ಪರಪ್ಪನ ಅಗ್ರಹಾರ ಬಳಿಯ ಎಟಿಎಂನಿಂದ 24 ಲಕ್ಷ ರೂ. ಎಗರಿಸಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಮಹೇಶ್, ಅರುಳ್ ಕುಮಾರ್, ನದೀಂ ಹಾಗೂ ಶ್ರೀರಾಮ್ ಬಂಧಿತ ಅರೋಪಿಗಳು. ಇನ್ನು, ಮುಖ್ಯವಾಗಿ ಎಟಿಎಂಗೆ ಹಣ ಹಾಕಿದ ತಂಡದ ಸದಸ್ಯನಿಂದಲೇ ಎಟಿಎಂ ದರೋಡೆಯಾಗಿದೆ.
ಜುಲೈ 5ನೇ ತಾರೀಖು ಎಟಿಎಂಗೆ ಹಣ ತುಂಬಿಸಿದ್ದ ಸಿಎಂಎಸ್ ಕಂಪನಿಯ ಕಸ್ಟೋಡಿಯನ್ ಅರುಳ್ ಕುಮಾರ್ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ. ಎಟಿಎಂಗೆ ಹಣ ತುಂಬಿದ ಕೆಲವೇ ನಿಮಿಷಗಳಲ್ಲಿ ತನ್ನ ಆಪ್ತರಿಗೆ ಮಾಹಿತಿ ನೀಡಿದ್ದ. ನಂತರ ಹೆಲ್ಮೆಟ್ ಹಾಕಿಕೊಂಡು ಬಂದ ಅರುಳ್ ಕುಮಾರ್ ಹಾಗೂ ಆತನ ತಂಡದವರು 25 ಲಕ್ಷ ಹಣವನ್ನು ಎಗರಿಸಿ ಎಸ್ಕೇಪ್ ಆಗಿದ್ದರು. ಪೊಲೀಸರು ಕಾರ್ಯಾಚರಣೆಗಿಳಿದು ಕಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಓದಿದ್ದು 5ನೇ ಕ್ಲಾಸ್ : ವೈದ್ಯ, ಇಂಜಿನಿಯರ್ ಸೋಗಿನಲ್ಲಿ ಆಗಿದ್ದು ಬರೋಬ್ಬರಿ 15 ಮದುವೆ
ಮೊಬೈಲ್ ಕದಿಯಲು ಬಂದವ ಅರೆಸ್ಟ್
ಬೆಂಗಳೂರಿನ ಜೆಕೆಡಬ್ಲ್ಯೂ(JKW)ಲೇಔಟ್ನಲ್ಲಿ ಕಳ್ಳತನಕ್ಕೆ ಬಂದಿದ್ದ ಕಳ್ಳನನ್ನ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮನೆಯೊಂದರಲ್ಲಿ ಚಾರ್ಜಿಂಗ್ಗೆ ಹಾಕಿದ್ದ ಫೋನ್ ಕಳ್ಳತನ ಮಾಡಲು ಕಳ್ಳ ಮುಂದಾಗಿದ್ದ. ಬಾಗಿಲು ತೆಗೆದು ನೇರ ಮನೆಯೊಳಗೆ ನುಗ್ಗಿ ಮೊಬೈಲ್ ತೆಗೆದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾನೆ.
ಅದೇ ಸಮಯದಲ್ಲಿ ಮೊಬೈಲ್ ತೆಗೆದುಕೊಳ್ಳುವುದನ್ನು ನೋಡಿದ ಮನೆಯವರು ಕಳ್ಳನನ್ನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಕಳ್ಳ ಕಲ್ಲು ಎಸೆದು ಓಡಿ ಹೋಗಲು ಮುಂದಾಗಿದ್ದಾನೆ. ಪಕ್ಕದ ಮನೆಯವರು ಇದೇ ಸಮಯಕ್ಕೆ ಹೊರಬಂದು ಕಳ್ಳನನ್ನು ಹಿಡಿದಿದ್ದಾರೆ. ಕಳ್ಳನನ್ನು ಹಿಡಿದ ಸ್ಥಳೀಯರು ಗೋವಿಂದರಾಜನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.