ಬೆಂಗಳೂರು : ಅಪಘಾತದಲ್ಲಿ ಮೃತಪಟ್ಟ ಕೆಎಸ್ಸಾರ್ಟಿಸಿ ಚಾಲನಾ ಸಿಬ್ಬಂದಿ ಜಿ.ವಿ ಚಲಪತಿ ಹಾಗೂ ಪಿ.ಎನ್ ನಾಗರಾಜು ಅವರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರಿನ ಕರಾರಸಾ ನಿಗಮದ ಕೇಂದ್ರ ಕಚೇರಿಯಲ್ಲಿ ಪರಿಹಾರ ಚೆಕ್ ವಿತರಿಸಿದ ಬಳಿಕ ಅವರು ಮಾತನಾಡಿದರು.
ಕೆಎಸ್ಸಾರ್ಟಿಸಿಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ಸಿಬ್ಬಂದಿಗಳಿಗೆ 1 ಕೋಟಿ ಮೊತ್ತದ ಅಪಘಾತ ವಿಮೆಯನ್ನು (On duty and Off Duty ಅಪಘಾತ) ಜಾರಿಗೊಳಿಸಿದೆ ಎಂದರು.
ಮೃತಪಟ್ಟ ಚಾಲನಾ ಸಿಬ್ಬಂದಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದೆ. ಈ ಯೋಜನೆಯನ್ನು ಸದ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಜರುಗಿಸಲು ಸೂಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : KSRTC ನೌಕರರಿಗೆ ಗುಡ್ ನ್ಯೂಸ್
ಸಿಬ್ಬಂದಿ ಹಿತಾಸಕ್ತಿ ಕಾಪಾಡಲು ಸದಾ ಸಿದ್ದ
ಕುಟುಂಬದವರು ಹಣವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು. ನಿಗಮದ ಸಿಬ್ಬಂದಿಗಳ ಹಾಗೂ ಕುಟುಂಬದವರ ಹಿತಾಸಕ್ತಿ ಕಾಪಾಡಲು ನಾವು ಸದಾ ಸಿದ್ದರಿದ್ದೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಎಸ್ ಬಿಐ ಬ್ಯಾಂಕಿನ ವ್ಯವಸ್ಥಾಪಕ ಹೆಚ್.ವಿ. ಅನಂತ ಸುಬ್ಬರಾವ್, ಬಿ. ಜಯದೇವರಾಜೇ ಅರಸು, ಜಿ.ಎಸ್ ಮಹದೇವಯ್ಯ, ಹೆಚ್.ಡಿ ರೇವಪ್ಪ, ಎಸ್ ನಾಗರಾಜ, ವೆಂಕಟರಮಣಪ್ಪ ಮತ್ತಿತರಿದ್ದರು.