Sunday, December 22, 2024

ವರದಕ್ಷಿಣೆ ಆಸೆಗೆ ಪತ್ನಿಯನ್ನೇ ಕೊಂದ ಪಾಪಿ ಪತಿ

ಹಾಸನ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಯಡಿಯೂರು ಗ್ರಾಮದಲ್ಲಿ ನಡೆದಿದೆ.

ಯಡಿಯೂರು ಗ್ರಾಮದ ನಿವಾಸಿ ಅನಿತಾ (27) ಮೃತಪಟ್ಟ ಮಹಿಳೆ. ಯೋಗೇಶ್‌ ತನ್ನ ಪತ್ನಿಯನ್ನೇ ಹತ್ಯೆಗೈದ ಪತಿ.

ಆರೇಳು ವರ್ಷದ ಹಿಂದೆ ಬೇಲೂರು ತಾಲೂಕಿನ ಮುರೇಹಳ್ಳಿ ಗ್ರಾಮದ ಅನಿತಾಳನ್ನು ಯಡಿಯೂರು ಗ್ರಾಮದ ಯೋಗೇಶ್‌ಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದ. ಇದಾದ ಬಳಿಕ ಮತ್ತಷ್ಟು ವರದಕ್ಷಿಣೆ ತರುವಂತೆ ಆಗಾಗ್ಗೆ ಪತ್ನಿ ಅನಿತಾಗೆ ಯೋಗೇಶ್ ಕಿರುಕುಳ ನೀಡುತ್ತಿದ್ದ.

ಹತ್ತಾರು ಬಾರಿ ರಾಜಿ ಸಂಧಾನ

ಹತ್ತಾರು ಬಾರಿ ರಾಜಿ ಸಂಧಾನ ಮಾಡಲಾಗಿತ್ತು. ಅಷ್ಟೇ ಅಲ್ಲ, ಎರಡು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದರೂ, ಯೋಗೇಶ್ ಬದಲಾಗದೆ ತನ್ನ ಕಿರುಕುಳ ಮುಂದುವರಿಸಿದ್ದ. ಮದುವೆಯಾದಾಗಿನಿಂದ ಅನಿತಾ ತವರು ಮನೆಯಲ್ಲೇ ಹೆಚ್ಚು ಅವಧಿ ಕಳೆದಿದ್ದರು. ರಾಜಿ ಪಂಚಾಯ್ತಿ ನಂತರವೂ ಒಂದು ತಿಂಗಳ ಹಿಂದೆ ಪತಿ ಜಗಳವಾಡಿ ಹಲ್ಲೇ ಮಾಡಿದ್ದರಿಂದ ಅನಿತಾ ತವರು ಮನೆ ಸೇರಿದ್ದಳು.

ಇದನ್ನೂ ಓದಿ : ಕೊಡಲಿಯಿಂದ ಕೊಚ್ಚಿ ಪತ್ನಿಯನ್ನೇ ಕೊಂದ ಪತಿರಾಯ

ಗಂಡ ಹಲ್ಲೆ ಮಾಡ್ತಿದ್ದಾನೆ ಬನ್ನಿ ಎಂದಿದ್ದಳು

ಮತ್ತೆ ರಾಜಿ ಸಂಧಾನ ಮಾಡಿ ಯೋಗೇಶ್ ಅನಿತಾಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ನಿನ್ನೆ ತನ್ನ ಹಳೇ ಚಾಳಿ ಬಿಡದೆ ಜಗಳ ತೆಗೆದು ಮನ ಬಂದಂತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇದರಿಂದ ನೊಂದ ಅನಿತಾ ತನ್ನ ಪೋಷಕರಿಗೆ ಫೋನ್ ಮಾಡಿ ಮತ್ತೆ ಜಗಳ ತೆಗೆದು ನನ್ನ ಪತಿ ಹಲ್ಲೆ ಮಾಡುತ್ತಿದ್ದಾನೆ ಬನ್ನಿ ಎಂದು ಕರೆದಿದ್ದಾಳೆ. ಅದರಂತೆ ಪೋಷಕರು ಯಡಿಯೂರಿಗೆ ಬರುವಷ್ಟರಲ್ಲಿ ಅನಿತಾ ಕೊನೆಯುಸಿರೆಳೆದಿದ್ದಳು ಎನ್ನಲಾಗಿದೆ.

ಪತ್ನಿಯ ಜೀವ ತೆಗೆದ ಪಾಪಿ, ಮನೆಯಿಂದ ಅನಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ. ತಮ್ಮ ಮಗಳನ್ನು ಯೋಗೇಶನೇ ಕೊಲೆ ಮಾಡಿದ್ದು, ಆತನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ಮೃತೆ ಪೋಷಕರು ಹಾಗೂ ಸಂಬಂಧಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES