ಹುಬ್ಬಳ್ಳಿ : ಜೈನ ಮುನಿ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮೂರು ಪಕ್ಷಗಳ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯ ವರೂರ ನವಗ್ರಹ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಸೇನೆ ಈ ಘಟನೆಯನ್ನು ಖಂಡಿಸುತ್ತದೆ ಎಂದರು.
ಮುನಿಗಳ ಹತ್ಯೆಯಲ್ಲಿ ಉಗ್ರ ಸಂಘಟನೆ ಕೈವಾಡ ಇದೆ ಎಂಬುದು ತನಿಖೆಯಿಂದಲೇ ಹೊರಬೀಳಬೇಕು. ಇದು ತಾಲಿಬಾನ್ ಮಾನಸ್ಥಿತಿ. ಇದರಲ್ಲಿ ಮುಚ್ಚುವಂತ ಪ್ರಯತ್ನ ಮಾಡಿದ್ರೆ ಪೊಲೀಸ್ ಇಲಾಖೆಯನ್ನು ಬಿಡೋದಿಲ್ಲ. 6 ಲಕ್ಷ ವಿಚಾರವಾಗಿ ಮುನಿಗಳ ಕೊಲೆ ಆಗಿದೆ ಅಂತಿದ್ದಾರೆ. ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಗುಡುಗಿದರು.
ಬಿಜೆಪಿ ಅವ್ರು ನಾಲಾಯಕರಿದ್ದೀರಿ
ತನಿಖೆಗೆ ಮುಕ್ತ ಅವಕಾಶ ಕೊಡಬೇಕು. ರಾಜ್ಯ ಪೊಲೀಸರು ತನಿಖೆ ಮಾಡ್ತಾರೆ, ಅವರಿಗೆ ಅರ್ಹತೆ ಇದೆ. ರಾಜ್ಯದಲ್ಲಿ ಆತಂಕ ಶುರುವಾಗಿದೆ, ಹಿಂದೂ ವಿರೋಧ ಮಾಡ್ತಾ ಇದ್ದಾರೆ. ಬಿಜೆಪಿ ಅವರಿದ್ದಾಗ ಸುರಕ್ಷತೆ ಇತ್ತು ಅಂತ ಹೇಳೋಕೆ ಆಗಲ್ಲ. ಬಿಜೆಪಿ ಅವರು ನಾಲಾಯಕರಿದ್ದೀರಿ, ಹೇಳೋಕೆ ನೈತಿಕತೆ ಇಲ್ಲ ನಿಮಗೆ. ಅದಕ್ಕೆ ನಿಮ್ಮನ್ನು ಚುನಾವಣೆಯಲ್ಲಿ ಮಲಗಿಸಿ ಬಿಟ್ಟಿದ್ದಾರೆ ಎಂದು ಛೇಡಿಸಿದರು.
ಇದನ್ನೂ ಓದಿ : ನಮ್ಮ ಮುನಿಗಳು ಅನ್ಯಾಯ, ಮೋಸ, ಕಳ್ಳತನ ಮಾಡಿಲ್ಲ : ಲಲಿತ ಕೀರ್ತಿ ಶ್ರೀ ಬೇಸರ
ಕುರಿ-ಕೋಳಿ ಕತ್ತರಿಸುವ ಮಾದರಿ
ನಾನು ಸ್ಥಳಕ್ಕೆ ಹೋಗಿ ಬಂದಿರುವೆ. ಹಿರೇಕೋಡಿ ಗ್ರಾಮದಿಂದ ಕಿಲೋ ಮೀಟರ್ ಅಂತರದಲ್ಲಿದೆ ಆ ಮಠ. ಮುನಿಗಳು ಒಬ್ಬರೇ ಇರುತ್ತಿದ್ದರು. ಒಂಟಿತನ ನೋಡಿ ವ್ಯವಸ್ಥಿತವಾಗಿ ಹತ್ಯೆ ಮಾಡಿದ್ದಾರೆ. ಇದು ಸಾಮಾನ್ಯ ಕೊಲೆ ಅಲ್ಲ. ಇದು ಕುರಿ-ಕೋಳಿ ಕತ್ತರಿಸುವ ಮಾದರಿಯಲ್ಲಿ ಮಾಡಿರುವ ಘಟನೆ. ಈ ಮಾನಿಸಿಕ ಸ್ಥಿತಿ ಇರುವಂಥವರು ಯಾರು ಅಂತ ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಯುಪಿ ಮಾದರಿಯಲ್ಲೇ ಶಿಕ್ಷೆ ಆಗ್ಬೇಕು
ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಬಿಜೆಪಿಯವರು ಹೇಳುತ್ತಿದ್ದಾರೆ. ನಿಮ್ಮ ಪಕ್ಷ ಇದ್ದಾಗ ಸಿಬಿಐಗೆ ಒಪ್ಪಿಸಿದ ಪ್ರಕರಣ ಏನಾಯ್ತು? ನೀವು ಬಾಯಿ ಮುಚ್ಕೊಂಡಿರಿ. ರಾಜ್ಯದ ಪೊಲೀಸರು ಸಮರ್ಥರಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಅಂತ ಎಲ್ಲರೂ ಆಗ್ರಹಿಸುತ್ತಿದ್ದಾರೆ. ಉತ್ತರ ಪ್ರದೇಶ ಮಾದರಿಯಲ್ಲೇ ಅವ್ರಿಗೆ ಶಿಕ್ಷೆ ಆಗಬೇಕು. ಬೋಲ್ಡೋಜರ್ ಮೂಲಕ ಮನೆ ಬೀಳಿಸಿ ಅವರ ಆಸ್ತಿ ಜಪ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕಕ್ಕೆ ದೊಡ್ಡ ಕಳಂಕ
ಅಹಿಂಸಾವಾದಿಗಳನ್ನು ಕೊಲೆ ಮಾಡಿದ್ದಾರೆ. ಕರ್ನಾಟಕಕ್ಕೆ ದೊಡ್ಡ ಕಳಂಕ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸಿಸ್ಟಮ್ ಇಷ್ಟು ದುರ್ಬಲ ಇದೆ. ಒಂದು ವರ್ಷದಲ್ಲಿ ಆರೋಪಿಗಳು ಜಾಮೀನು ಪಡೆದು ಹೊರಗೆ ಬರುತ್ತಾರೆ. ಯಾವುದೇ ಧರ್ಮ, ಜಾತಿ ಇರಲಿ ಅವರಿಗೆ ಶಿಕ್ಷೆ ಕೊಡಲೇ ಬೇಕು ಎಂದು ಹೇಳಿದರು.