ಬೆಂಗಳೂರು : ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರದ ಪುಣ್ಯಕ್ಷೇತ್ರ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ರಮೇಶ್ ಕುಮಾರ್ ಹೇಳಿಕೆ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರದ ಪಿತಾಮಹ ಎಂದು ಕುಟುಕಿದರು.
ಮೂರು ತಲೆಮಾರಿಗೆ ಆಗುವಷ್ಟು ಮಾಡಿಟ್ಟುಕೊಂಡಿದ್ದೇವೆ ಎಂಬ ಹೇಳಿಕೆಯನ್ನು ನಾರಾಯಣ ಸ್ವಾಮಿ ಉಲ್ಲೇಖಿಸಿದರು. ವಿದ್ಯಾನಿಧಿ ಯೋಜನೆ ಬಗ್ಗೆ ಪ್ರಸ್ತಾಪ ಇಲ್ಲ. ಭೂಸಿರಿ ಯೋಜನೆ ಕೈಬಿಟ್ಟಿದ್ದಾರೆ. ಸರ್ವತೋಮುಖ ಅಭಿವೃದ್ಧಿ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲ ಎಂದು ಗುಡುಗಿದರು.
ಇದನ್ನೂ ಓದಿ : ವಿಧಾನಸಭೆಯನ್ನು ಮೆಕ್ಕಾ-ಮದೀನಾ ಅಂದುಕೊಂಡಿದ್ದೀರಾ? : ಪ್ರಮೋದ್ ಮುತಾಲಿಕ್ ಕಿಡಿ
ಅಡ್ಜಸ್ಟ್ ಮಾಡಿಕೊಳ್ಳಿ ಅಂತಾರೆ
ಬ್ಯಾಟರಾಯನಪುರದಲ್ಲಿ ಹಲವು ವರ್ಷದ ಹಿಂದೆ ಸೈಟ್ ತಗೊಂಡಿದ್ದೆ. ಆದ್ರೆ, ಈಗ ಯಾರೋ ಬಂದು ಹೊಸದಾಗಿ ಲೇಔಟ್ ಮಾಡ್ತಿನಿ ಅಂತ ಹೇಳ್ತಿದ್ದಾರೆ. ಈ ಬಗ್ಗೆ ದೂರು ಕೊಡೋದಕ್ಕೆ ಹೋದ್ರೆ ಪೊಲೀಸ್ ನವರು ನೀವೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಅಂತಾರೆ. ಪೊಲೀಸ್ ಠಾಣೆಯಲ್ಲಿ ಸೆಟ್ಲ್ ಮೆಂಟ್ ಮಾಡಿಕೊಳ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಬಹುತೇಕ ಸದಸ್ಯರು ಗೈರು
ಪರಿಷತ್ ನಲ್ಲಿ ಬಹುತೇಕ ಸದಸ್ಯರು ಗೈರು ಹಾಜರಾಗಿದ್ದರು. ಕಾಂಗ್ರೆಸ್ ಪಕ್ಷದ 7 ಸದಸ್ಯರು ಹಾಗೂ ಬಿಜೆಪಿ ಪಕ್ಷದ 7 ಸದಸ್ಯರು ಉಪಸ್ಥಿತರಿದ್ದರು. ಜೆಡಿಎಸ್ ನ ಎಲ್ಲಾ ಸದಸ್ಯರು ಗೈರು ಹಾಜರಾಗಿದ್ದರು. ಆಡಳಿತ ಪಕ್ಷದ ಸಚಿವರಿಲ್ಲದೆ ಸದನ ನಡೆಸೋದು ಹೇಗೆ? ಎಂದು ಬಿಜೆಪಿ ಸದಸ್ಯರು ಪ್ರಶ್ನೆ ಮಾಡಿದರು. ಕನಿಷ್ಟ ಮೂರು ಜನ ಮಂತ್ರಿಗಳು ಇರಬೇಕು ಅಂತ ನೀವೆ ಹೇಳಿದ್ರೆ ಹೇಗೆ? ಎಂದು ಸಭಾಪತಿಗಳಿಗೆ ಕೇಳಿದರು.