ಬೆಂಗಳೂರು : ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಮೊದಲು ಅದನ್ನು ನೋಡಿ. ಆ ನಂತರ ಬೇರೆಯವರ ತಟ್ಟೆಯಲ್ಲಿ ನೋಣ ನೋಡುವಿರಂತೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಇರಲಿಲ್ಲ. ಅಡಾಕ್ ಅಧ್ಯಕ್ಷರು ಇದ್ರು. ನಂತರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷ ಮಾಡಿದ್ದು ಎಂದು ಚಾಟಿ ಬೀಸಿದರು.
ಪಕ್ಷದ ವರಿಷ್ಠರು ನಮ್ಮ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಇಂದಲ್ಲ ನಾಳೆ ವಿಪಕ್ಷ ನಾಯಕರ ನೇಮಕ ಆಗೇ ಆಗುತ್ತದೆ. ಈಗಾಗಲೇ ಹೇಳಿದ್ದೇವೆ ಇರುವ 66 ಶಾಸಕರೂ ವಿಪಕ್ಷ ನಾಯಕರೇ. ಸಮಸ್ಯೆ ಬಗೆಹರಿಸುವುದರ ವಿರುದ್ಧ, ಆಡಳಿತ ಪಕ್ಷದ ವಿರುದ್ಧ ನಮ್ಮ ಹೋರಾಟ ಎಂದು ಕುಟುಕಿದರು.
ಇದನ್ನೂ ಓದಿ : ರಾಜ್ಯದಾದ್ಯಂತ ಗ್ರಾಮೀಣ ನ್ಯಾಯಾಲಯಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ : ಸಚಿವ ಎಚ್‌ಕೆ ಪಾಟೀಲ್
ಎಲ್ಲಾ ಭಾಗ್ಯ ಕೊಡ್ತೀನಿ ಅಂದ್ರಿ
ಎಲ್ಲಾ ಭಾಗ್ಯ ಜಾರಿಗೆ ತರ್ತಿದ್ದೀವಿ, ಆದರೆ, ವಿಪಕ್ಷ ನಾಯಕ ಭಾಗ್ಯ ಇಲ್ಲ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರ ಕುರಿತು ಮಾತನಾಡಿ, ಕಾಂಗ್ರೆಸ್ ಅವರು ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ ಅಂದಿದ್ದಾರೆ. ನೀವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಲ್ಲಾ ಭಾಗ್ಯ ಕೊಡ್ತೀನಿ ಅಂದ್ರಿ. ಹೇಳಿದ ಹಾಗೆ ಮಾಡಲು ಆಗಲಿಲ್ಲ. ಈಗ ಕಂಡೀಷನ್ ಹಾಕೋಂಡು ಬಂದಿದ್ದೀರಿ ಎಂದು ತಿರುಗೇಟು ಕೊಟ್ಟರು.
ಜೈನ ಸ್ವಾಮೀಜಿ ಹತ್ಯೆ ದುರ್ದೈವ. ಈ ಘಟನೆಯನ್ನು ಬಿಜೆಪಿ ಖಂಡಿಸುತ್ತದೆ. ಜೈನ ಸಮುದಾಯ ಇಡೀ ದೇಶದಲ್ಲಿದೆ. ಆ ಸಮುದಾಯಕ್ಕೆ ಒಂದು ಸಂದೇಶ ಹೋಗಬೇಕು. ಅದಕ್ಕಾಗಿ ಸಿಬಿಐ ತನಿಖೆಗೆ ಕೇಳಿದ್ದೇವೆ. ಆ ಸಮುದಾಯಕ್ಕೆ ನ್ಯಾಯ ಸಿಗಲು ಸೂಕ್ತ ತನಿಖೆ ಆಗಬೇಕು ಎಂದು ಆರ್. ಅಶೋಕ್ ಹೇಳಿದರು.