ಬೆಂಗಳೂರು : ಸರ್ಕಾರಿ ನೇಮಕಾತಿ ಆಗುವವರೆಗೂ ಹೊರಗುತ್ತಿಗೆಗೂ ಮೀಸಲಾತಿ ತರುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದಲ್ಲಿ ಮಾತನಾಡಿದ ಅವರು, ಹೊರಗುತ್ತಿಗೆ ನೌಕರಿಯಲ್ಲೂ ಮೀಸಲಾತಿ ತರುವ ಬಗ್ಗೆ ಸುಳಿವು ನೀಡಿದರು.
ರಾಜ್ಯದಲ್ಲಿ ಸರ್ಕಾರಿ ಹುದ್ದೆ 7 ಲಕ್ಷಕ್ಕೂ ಹೆಚ್ಚಿದೆ. 5 ಲಕ್ಷಕ್ಕೂ ಹೆಚ್ಚು ಹುದ್ದೆ ತುಂಬಿದೆ. ಎರಡುವರೆ ಲಕ್ಷ ಹುದ್ದೆ ಖಾಲಿ ಇದೆ. ಅದಕ್ಕಾಗಿ ಹೊರಗುತ್ತಿಗೆ ಮಾಡಲಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ರೆ, ಖಾಲಿ ಇರುವ ಹುದ್ದೆ ತುಂಬೋದು ಎಂದರು.
ಇದನ್ನೂ ಓದಿ : ಅಮರನಾಥ ಯಾತ್ರೆಗೆ ತೆರಳಿದ್ದ ಕನ್ನಡಿಗರು ಸುರಕ್ಷಿತ : ಸಿದ್ದರಾಮಯ್ಯ
ಹಂತ ಹಂತವಾಗಿ ಹುದ್ದೆ ಭರ್ತಿ
ಕಾಂಟ್ರಾಕ್ಟ್ ಬೇಸಿಸ್ ತುಂಬುವಾಗ ರಿಸರ್ವೇಷನ್ ಇಲ್ಲ. ರಿಸರ್ವೇಷನ್ ಇಲ್ಲದಿದ್ರೆ, ಸಾಮಾಜಿಕ ನ್ಯಾಯ ಇರೋಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಕೂಡ ಖಾಲಿ ಹುದ್ದೆ ಭರ್ತಿ ಮಾಡೋದಾಗಿ ಹೇಳಿದ್ದೇವೆ. ಹೆಚ್ಚಾಗಿ ಶಿಕ್ಷಕರು, ಪೊಲೀಸ್, ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ. ಅದನ್ನ ಹಂತ ಹಂತವಾಗಿ ತುಂಬುತ್ತೇವೆ ಎಂದು ಮಾಹಿತಿ ನೀಡಿದರು.
ಸಂತೋಷದಿಂದ ಭಾಗಿಯಾಗಿದ್ದೇನೆ
ಉಗ್ರಪ್ಪ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ನಾನು ಒಪ್ಪಿದ್ದೆ. ಆದರೆ, ಆರೋಗ್ಯ ಸಮಸ್ಯೆಯಿಂದ ಬರುವುದಕ್ಕೆ ಆಗುವುದಿಲ್ಲ ಅಂತ ಹೇಳಿದ್ದೆ. ಉಗ್ರಪ್ಪ ಅವರು, ನೀವು ಬರದಿದ್ದರೆ ಜನ ನಿರಾಸೆಯಾಗುತ್ತಾರೆ ಅಂದ್ರ. ಹಾಗಾಗಿ, ಈ ಕಾರ್ಯಕ್ರಮದಲ್ಲಿ ಸಂತೋಷದಿಂದ ನಾನು ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.