ಮೈಸೂರು: ಒಂದಲ್ಲ, ಎರಡಲ್ಲ 15 ಮದುವೆ ಮಾಡಿಕೊಂಡು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ನಾಳೆಯಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ‘ಹಣ’ಭಾಗ್ಯ: ಸಿಎಂ ಸಿದ್ದರಾಮಯ್ಯರಿಂದ ಚಾಲನೆ
ಬೆಂಗಳೂರಿನ ಬನಶಂಕರಿ ಬಡಾವಣೆಯ ಮಹೇಶ್ (35) ಬಂಧಿತ ಆರೋಪಿ, ಬಂಧಿತನಿಂದ 2 ಲಕ್ಷ ನಗದು, 2 ಕಾರ್, 7 ಮೊಬೈಲ್, 1 ಬ್ರೇಸ್ ಲೈಟ್, 1 ಉಂಗುರ, 2 ಚಿನ್ನದ ಬಳೆ, 1 ನೆಕ್ಲೆಸ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಮಹೇಶ್, ಹಣಕ್ಕಾಗಿ ಮಧ್ಯವಯಸ್ಕ ಯುವತಿಯರು, ಆಂಟಿಯರು ಮತ್ತು ವಿಧವೆಯರನ್ನು ಟಾರ್ಗೆಟ್ ಮಾಡಿ ಆನ್ಲೈನ್ನ ಶಾದಿಡಾಟ್.ಕಾಂ ಮೂಲಕ ಡಾಕ್ಟರ್, ಎಂಜಿನಿಯರ್, ಕಂಟ್ರಾಕ್ಟರ್, ಬ್ಯುಸಿಸೆನ್ ಮೆನ್ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡು ಒಟ್ಟು 15 ಮದುವೆಯಾಗುತ್ತಿದ್ದ.
ಇದೇ ರೀತಿ ಶಾದಿ ಡಾಟ್ ಕಾಂ. ನಲ್ಲಿ ಮೈಸೂರಿನ ನಿವಾಸಿ ಹೇಮಲತಾ ಎಂಬಾಕೆಯೊಂದಿಗೆ ಡಾಕ್ಟರ್ ಎಂದು ಹೇಳಿಕೊಂಡು ನಂಬಿಸಿ ಜ. 1, 2023 ರಂದು ವಿಶಾಖಪಟ್ಟಣದಲ್ಲಿ ವಿವಾಹವಾಗಿದ್ದರು. ಬಳಿಕ ಕ್ಲಿನಿಕ್ ನಡೆಸಲು 70 ಲಕ್ಷ ಹಣ ನೀಡುವಂತೆ ಹೇಮಲತಾರಿಗೆ ಬೇಡಿಕೆ ಇಟ್ಟಿದ್ದ ಆದರೇ ಹೇಮಲತಾ ಹಣ ನೀಡಲು ನಿರಾಕರಿಸಿದ್ದಳು ಎನ್ನುವ ಕಾರಣಕ್ಕೆ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈತನ ವಿರುದ್ದ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಗೆ ಹೇಲಲತಾ ದೂರು ನೀಡಿದ್ದರು.
ಇನ್ನೂ ಬೆಂಗಳೂರಿನಲ್ಲೂ ಆರೋಪಿ ಮಹೇಶ್ ವಿರುದ್ದ ದಿವ್ಯಾ ಎಂಬಾಕೆ ವಂಚನೆ ಪ್ರಕರಣ ದಾಖಲಿಸಿದ್ದರು. ದೂರುಗಳನ್ನು ಆಧರಿಸಿ ಮೈಸೂರು ಪೊಲೀಸರು ಆರೋಪಿ ಮಹೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಎಲ್ಲಾ ಪ್ರಕರಣಗಳು ಬಯಲಿಗೆ ಬಂದಿವೆ.