ಚಿತ್ರದುರ್ಗ : ಕೆಲವು ಸಂಗತಿಗಳನ್ನು ನಾನು ಹೇಳಲು ಆಗುವುದಿಲ್ಲ. ನನ್ನ ಬಳಿಯೂ ಈ ಪ್ರಶ್ನೆಗೆ ಉತ್ತರ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ವಿಪಕ್ಷ ನಾಯಕನ ಆಯ್ಕೆ ವಿಳಂಬ ಕುರಿತು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದರು.
ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಗೊಂದಲ ಇಲ್ಲ, ಬಹಳ ಹುಡುಕಬೇಕಾದ ಸ್ಥಿತಿಯೂ ಇಲ್ಲ. ಇಬ್ಬರು ವೀಕ್ಷಕರು ಈಗಾಗಲೇ ಬಂದು ವರದಿ ತೆಗೆದುಕೊಂಡು ಹೋಗಿದ್ದಾರೆ. ಬಹುಶಃ ಬೇರೆನಾದ್ರೂ ಯೋಚನೆ ಇರಬಹುದು ಎನ್ನುವ ಮೂಲಕ ವಿಪಕ್ಷ ನಾಯಕ ಸ್ಥಾನಕ್ಕೆ ಹೊಸಮುಖದ ಸುಳಿವು ನೀಡಿದರು.
ಇದನ್ನೂ ಓದಿ : ಇಂದು ವಿಪಕ್ಷ ನಾಯಕನ ಘೋಷಣೆ ಆಗಬಹುದು : ಬಿ.ಎಸ್.ಯಡಿಯೂರಪ್ಪ
ಜನ ವಿರೋಧಿ ನೀತಿ ಅನುಸರಿಸುತ್ತಿದೆ
ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭದಿಂದಲೇ ಗೊಂದಲದಲ್ಲಿದೆ. ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆ ಎಲ್ಲರಿಗೂ ಫ್ರೀ ಅಂದಿದ್ದರು. ಈಗ ಗ್ಯಾರಂಟಿ ಯೋಜನೆಗೆ ಕಂಡಿಷನ್ಸ್ ಹಾಕುತ್ತಿದ್ದಾರೆ. ಬೆಲೆ ಏರಿಕೆ ಬರೆ ಹಾಕಿ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಜನರ ಗಮನ ಡೈವರ್ಟ್ ಮಾಡ್ತಿದೆ
ಸರ್ಕಾರ ವಿದ್ಯುತ್ ದರ ಏರಿಸುವ ಕೆಲಸ ಮಾಡಿದೆ. ಆ ಮೂಲಕ ಜನರ ಗಮನ ಡೈವರ್ಟ್ ಮಾಡಲು ಬೇರೆ ವಿಚಾರಗಳ ಮೊರೆ ಹೋಗಿದೆ. ಮೂಲ ಸೌಕರ್ಯದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೂಲ ಸೌಕರ್ಯ ಅಭಿವೃದ್ಧಿಯಲ್ಲೇ ಉದ್ಯೋಗ ಸಿಗುವುದು ಎಂದು ಹೇಳಿದರು.