ಬೆಂಗಳೂರು : ಕೊಬ್ಬರಿಗೆ ಬೆಂಬಲ ಬೆಲೆ ನಿರ್ಣಯ ಮಾಡದಿದ್ರೆ ಇಲ್ಲೇ ಪಂಚೆ ಹಾಸ್ಕೊಂಡು ಮಲಗ್ತೀವಿ ಎಂದು ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಎಚ್ಚರಿಕೆ ನೀಡಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಇಂದೇ ನಿರ್ಧಾರ ಮಾಡಬೇಕು. ಇಲ್ಲವಾದಲ್ಲಿ ಸದನದಲ್ಲೇ ಪಂಚೆ ಹಾಸಿಕೊಂಡು ನಾವು ಮಲಗುತ್ತೇವೆ ಎಂದು ಗುಡುಗಿದರು.
ಸ್ಪೀಕರ್ ಯು.ಟಿ ಖಾದರ್ ಅವರು ರಾತ್ರಿಗೆ ಇಲ್ಲೇ ಊಟ ಹಾಕಿಸ್ತಾರೆ. ಇಂದು ಕೊಬ್ಬರಿಗೆ ಬೆಂಬಲ ಬೆಲೆ ನಿರ್ಧಾರ ಮಾಡದಿದ್ದರೆ, ಸದನದಲ್ಲಿ ಅಹೋರಾತ್ರಿ ಧರಣಿ ಮಾಡಬೇಕಾಗುತ್ತದೆ ಎಂದು ಸದನದಲ್ಲಿ ಸರ್ಕಾರಕ್ಕೆ ರೇವಣ್ಣ ಆಗ್ರಹಿಸಿದರು.
ಇದನ್ನೂ ಓದಿ : ಹಾಲಿನ ಪುಡಿಯಲ್ಲೂ ದಂಧೆ ಶುರು ಮಾಡಿದ್ದೀರಾ? : ಬಿಜೆಪಿ ಕಿಡಿ
ರೈತರು ಕಂಗಾಲಾಗಿದ್ದಾರೆ
ರಾಜ್ಯದ 13 ಜಿಲ್ಲೆಗಳಲ್ಲಿ 10 ರಿಂದ 12 ಲಕ್ಷ ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ತುಮಕೂರು ಜಿಲ್ಲೆಯೊಂದರಲ್ಲೇ 3 ರಿಂದ 3.5 ಲಕ್ಷ ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ 2 ಲಕ್ಷ ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇಂದು ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
3000 ಬೆಂಬಲ ಬೆಲೆ ನೀಡಬೇಕು
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದರು. ಈಗಾಗಲೇ 11,700 ರೂ. ಬೆಂಬಲ ಬೆಲೆ ಇದ್ದು, ಅದರ ಜೊತೆಗೆ ಕನಿಷ್ಠ 3000 ರೂ. ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.