ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿ ಅವರ ವರ್ಗಾವಣೆ ದಂಧೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಅಂಥ ಹೊಲಸು ಕೆಲಸ ನಾನಂತೂ ಮಾಡಿಲ್ಲ, ಮಾಡಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅಂಥ ಅಭ್ಯಾಸ ನನಗಂತೂ ಇಲ್ಲ ಎಂದು ಕುಟುಕಿದರು.
ಒಂದೊಂದು ಬಾರಿ ಸಿಎಂ ಅವರು ಮಾಡಿರುತ್ತಾರೆ. ನಾನು ಮಾಡಿರುತ್ತೇನೆ, ಕೇಳೋಕೆ ಹೋಗಿರಲ್ಲ. ಅದು ಕ್ಲಬ್ ಆಗಿರುತ್ತದೆ. ಮಿಸ್ ಆಗಿ ಆಗಿರುತ್ತದೆ. ಹೆಚ್.ಡಿ ಕುಮಾರಸ್ವಾಮಿ ಅವರು ಆರೋಪ, ಅಭಿಪ್ರಾಯ ಹೇಳುವುದಕ್ಕೆ ಸ್ವತಂತ್ರರು. ಕಾನೂನು ಇದ್ದೇ ಇದೆ, ಅದಕ್ಕೆ ಸಂಬಂಧಿಸಿ ಕಾನೂನು ತನ್ನ ನಿರ್ಧಾರ ಕೈಗೊಳ್ಳುತ್ತದೆ. ಪೆನ್ ಡ್ರೈವ್ ಆದರೂ ಇರಲಿ, ಸಿಡಿ ಆದರೂ ಇರಲಿ. ನಿಮ್ಮ ಟಿವಿಯಲ್ಲಾದ್ರೂ ಇರಲಿ, ಏನೇ ಇದ್ದರೂ ಕಾನೂನು ಅಡಿಯಲ್ಲಿ ಎಲ್ಲವೂ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ : ಹಾಲಿನ ಪುಡಿಯಲ್ಲೂ ದಂಧೆ ಶುರು ಮಾಡಿದ್ದೀರಾ? : ಬಿಜೆಪಿ ಕಿಡಿ
ಮಾಜಿ ಶಿಕ್ಷಣ ಸಚಿವರ ಜೊತೆ ಸಭೆ
ಬಹಳ ದೊಡ್ಡ ಖಾತೆ ನಮ್ಮದು. ಸಭಾಪತಿಗಳ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆ ಜೊತೆ ಸಭೆ ಮಾಡಿದ್ದೇವೆ. ಮೇಲ್ಮನೆ ಸದಸ್ಯರನ್ನ ಕೂಡ ಕರೆದಿದ್ದೆವು. ನಮ್ಮ ಇಲಾಖೆಯ ವ್ಯವಸ್ಥೆ ಹಳ್ಳಿ ಮಟ್ಟದಿಂದಲೂ ಇದೆ. ನಮ್ಮ ಸರ್ಕಾರ ಹೇಗೆ ಮುಂದುವರೆಯಬೇಕು. ಇಲಾಖೆಯಲ್ಲಿ ಯಾವ ರೀತಿ ಮುಂದುವರಿಯಬೇಕು. ಈ ಬಗ್ಗೆ ಮಾಜಿ ಶಿಕ್ಷಣ ಸಚಿವರ ಜೊತೆಗೂ ಸಭೆ ಮಾಡಿ ಸಲಹೆಗಳನ್ನು ಪಡೆಯುತ್ತೇವೆ ಎಂದರು.
ಶೀಘ್ರ ಶಿಕ್ಷಕರ ನೇಮಕಾತಿ ಮಾಡ್ತೀವಿ
ಮುಂದೆ ಇಲಾಖೆಯಲ್ಲಿ ಉತ್ತಮ ವ್ಯವಸ್ಥೆ ಮಾಡುತ್ತೇವೆ. ಗಮನಾರ್ಹ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ಈ ಬಾರಿ ಕೆಲ ನಿರ್ಧಾರಗಳನ್ನು ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಮಾಡುತ್ತಾರೆ. ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲಾಗ್ತಿದೆ. ಅದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡ್ತಿದ್ದೇವೆ. ಅಧಿಕಾರ ವರ್ಗ ಉತ್ತಮ ಸಹಕಾರ ನೀಡ್ತಿದೆ. ಶಿಕ್ಷಕರ ನೇಮಕಾತಿ ಕೂಡ ಆದಷ್ಟು ಬೇಗ ಮಾಡುತ್ತೇವೆ ಎಂದು ಹೇಳಿದರು.