ಮೈಸೂರು : ಕೇಂದ್ರ ಸರ್ಕಾರ ರಾಜ್ಯಕ್ಕೆ 5 ಕಿಲೋ ಅಕ್ಕಿ ಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ನಗರದ ಜಲದರ್ಶಿನಿಯಲ್ಲಿ ಸಂಸದ ಪ್ರತಾಪ್ ಸಿಂಹ ಕಾರಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಅಲ್ಲದೆ, ಪ್ರತಾಪ್ ಸಿಂಹ ಎದುರೇ ‘ಪೇಪರ್ ತಿಮ್ಮ’ ಎಂದು ಪ್ರತಿಭಟನಾಕರಾರು ಅಣುಕಿಸಿದರು.
ಕಚೇರಿಯ ಗೇಟ್ ಬಳಿ ಪ್ರತಾಪ್ ಸಿಂಹ ಕಾರು ಬರುತ್ತಿದ್ದಂತೆ ಓಡೋಡಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದರು. ಕಾರ್ಯಕರ್ತರನ್ನು ಕಂಡು ಕಾರಿನ ಗ್ಲಾಸ್ ಏರಿಸಿ ಸಂಸದ ಪ್ರತಾಪ್ ಸಿಂಹ ಸ್ಥಳದಿಂದ ಹೊರಟ ಹೋದರು.
ಇದನ್ನೂ ಓದಿ : ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಇಂದು ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರಿನಲ್ಲೂ ಪ್ರೊಟೆಸ್ಟ್
ಇನ್ನೂ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಯಿತು. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ತಲೆ ಮೇಲೆ ಅಕ್ಕಿ ಮೂಟೆ ಹೊತ್ತು ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾವೇ ನಡೆದಿದ್ದು, ಮೊಹಮ್ಮದ್ ನಲಪಾಡ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.