ಬೆಂಗಳೂರು : ನಾವು ಶಾಸಕರು ನಮ್ಮ ಭಾವನೆ ಹೇಳ್ತೀನಿ, ನೀವು ಬೆಂಕಿ ಹಚ್ಚಬೇಡಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗಳ ಕಿವಿ ಹಿಂಡಿದರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಯನ್ನ ಕಾಂಟ್ರವರ್ಸಿ ಮಾಡಿದ್ರಿ. ದಯವಿಟ್ಟು ಹಾಗೆ ಮಾಡಬೇಡಿ ಎಂದು ನಯವಾಗಿಯೇ ಬುದ್ದಿ ಮಾತು ಹೇಳಿದರು.
ನಾವು ಒಗ್ಗಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರ ಗೆಲ್ತೀವಿ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಹುದ್ದೆಗೆ ಕಚ್ಚಾಡಲ್ಲ. ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಯಾರನ್ನ ಬೇಕಾದ್ರೂ ವಿಪಕ್ಷ ನಾಯಕ ಮಾಡಲಿ. ನೀವು ಬೆಂಕಿ ಹಚ್ಚಬೇಡಿ. ನಾವು ಹೇಳಿದ್ದನ್ನು ಕಾಂಟ್ರವರ್ಸಿ ಮಾಡ್ತೀರಿ ಎಂದು ತಿಳಿಸಿದರು.
ಇದನ್ನೂ ಓದಿ : ಸಿಎಂ, ಡಿಸಿಎಂ ಮೆಟ್-ಮೆಟ್ನಲ್ಲಿ ಹೊಡೆದಾಡಿಕೊಳ್ತಾರೆ : ಶಾಸಕ ಯತ್ನಾಳ್
ವಿಪಕ್ಷಗಳು ನುಚ್ಚು ನೂರಾಗುತ್ತವೆ
ನಾನು ವಿರೋಧ ಪಕ್ಷದ ನಾಯಕನ ರೇಸ್ನಲ್ಲಿ ಇದ್ದೀನಿ ಅಂತ ನೀವೇ ತೋರಿಸಿದ್ದೀರಿ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ದರಾಗಿದ್ದೇವೆ. ಯಾರೇ ಆದ್ರೂ ನಾನು ಸ್ವಾಗತ ಮಾಡ್ತೀವಿ. ಮತ್ತೆ ನಮ್ಮ ಮಧ್ಯೆ ಬೆಂಕಿ ಹಚ್ಚಬೇಡಿ. ಬಿಜೆಪಿಯಿಂದ ಯಾರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ದೇಶದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ವಿರೋಧ ಪಕ್ಷಗಳು ನುಚ್ಚು ನೂರಾಗುತ್ತವೆ ಎಂದು ಗುಡುಗಿದರು.
ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ
ವಿಪಕ್ಷ ನಾಯಕನ ಆಯ್ಕೆ ವಿಳಂಬ ವಿಚಾರ ಕುರಿತು ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬಿಜೆಪಿ ನಾಯಕರು ತಮ್ಮ ಪಕ್ಷ ಶಿಸ್ತಿನ ಪಕ್ಷ ಅಂತ ಹೇಳಿಕೊಳ್ಳುತ್ತಾರೆ. ಅತೀ ಹೆಚ್ಚು ಅಶಿಸ್ತು ಇರುವ ಪಕ್ಷ ಬಿಜೆಪಿ. ವಿಪಕ್ಷ ನಾಯಕನ ಆಯ್ಕೆ ಆಗದಿರುವ ಬಗ್ಗೆ ಗೊತ್ತಿಲ್ಲ, ಅದು ಅವರ ಪಕ್ಷದ ವಿಚಾರ ಎಂದು ಛೇಡಿಸಿದರು.